ಬೀಜಿಂಗ್: ವೈಜ್ಞಾನಿಕ ಪರಿಶೀಲನೆ ನಂತರವೇ ಭಾರತ-ಚೀನಾ ಗಡಿ ಸಮೀಪ ಟಿಬೆಟ್‌ನಲ್ಲಿ ಬ್ರಹ್ಮಪುತ್ರನದಿಗೆ ಅಡ್ಡಲಾಗಿ ಜಗತ್ತಿನ ಅತಿದೊಡ್ಡ ಅಣೆಕಟ್ಟೆ ನಿರ್ಮಾಣ ಮಾಡಲು ಮುಂದಾಗಿದ್ದೇವೆ. ಪ್ರಸ್ತಾವಿತ ಯೋಜನೆಯು ಭಾರತ ಮತ್ತು ಬಾಂಗ್ಲಾದೇಶದ ಮೇಲೆ ಯಾವುದೇ ದುಷ್ಪರಿಣಾಮ ಬೀರುವುದಿಲ್ಲ ಎಂದು ಚೀನಾ ಸೋಮವಾರ ಒತ್ತಿ ಹೇಳಿದೆ.
ಯೋಜನೆಯಿಂದ ನದಿಯು ಹರಿಯುವ ದೇಶಗಳ ಪರಿಸರ ಅಥವಾ ಜಲಸಂಪನ್ಮೂಲದ ಮೇಲೆ ಯಾವುದೇ ದುಷ್ಪರಿಣಾಮ ಬೀರುವುದಿಲ್ಲ ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಗೌ ಜಿಯಾಕುನ್ ಅವರು ಮಾಧ್ಯಮಗಳಿಗೆ ತಿಳಿಸಿದರು.
ಭಾರತದ ಕಳವಳದ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ, ಯೋಜನೆಯು ಪ್ರವಾಹದ ತಡೆಗೆ ಪೂರಕವಾಗಿದೆ. ಹೀಗಾಗಿ ವಿಪತ್ತನ್ನು ತಡೆಯಬಹುದು ಅಥವಾ ತಗ್ಗಿಸಬಹುದಾಗಿದೆ ಎಂದು ಹೇಳಿದರು.
ಚೀನಾವು ಯರ್ಲಿಂಗ್ ಝಿಂಗ್ಬೊ (ಭಾರತದಲ್ಲಿ ಬ್ರಹ್ಮಪುತ್ರ) ನದಿಯ ಕೆಳಭಾಗದಲ್ಲಿ ಅಂದರೆ ನದಿಯು ಭಾರತದ ಅರುಣಾಚಲ ಪ್ರದೇಶವನ್ನು ಪ್ರವೇಶಿಸುವ ಮುನ್ನ ದೊಡ್ಡದಾಗಿ ಯು-ಟರ್ನ್ ಪಡೆಯುವ ಹಿಮಾಲಯದ ಆಳವಾದ ಕಮರಿ ಪ್ರದೇಶದಲ್ಲಿ ಅಣೆಕಟ್ಟು ನಿರ್ಮಿಸಲು ಮುಂದಾಗಿದೆ. ಅಂದಾಜು 137 ಬಿಲಿಯನ್ ಡಾಲರ್ (₹11.67 ಲಕ್ಷ ಕೋಟಿ) ವೆಚ್ಚದಲ್ಲಿ ನಿರ್ಮಾಣಕ್ಕೆ ಯೋಜನೆ ರೂಪಿಸಿದೆ.