ವಾಷಿಂಗ್ಟನ್: ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವಾನ್ ಅವರು ಇದೇ 5 ಮತ್ತು 6ರಂದು ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ. ಭಾನುವಾರ ಭಾರತಕ್ಕೆ ಬರಲಿರುವ ಅವರು ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊಭಾಲ್ ಮತ್ತು ಇತರ ಹಿರಿಯ ಅಧಿಕಾರಿಗಳ ಜತೆ ಮಾತುಕತೆ ನಡೆಸಲಿದ್ದಾರೆ.
ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧ ವೃದ್ಧಿ, ಪ್ರಾದೇಶಿಕ ಮತ್ತು ಜಾಗತಿಕ ಸಮಸ್ಯೆಗಳ ಕುರಿತು ವ್ಯಾಪಕ ಚರ್ಚೆ ನಡೆಸಲಿದ್ದಾರೆ.
ಜೋ ಬೈಡನ್ ಆಡಳಿತ ನಾಲ್ಕು ವರ್ಷಗಳ ಅವಧಿ ಪೂರ್ಣಗೊಳಿಸಲು ತಯಾರಿ ನಡೆದಿರುವ ಸಂದರ್ಭದಲ್ಲಿಯೇ ಸುಲ್ಲಿವಾನ್ ಅವರು ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ. ಬೈಡನ್ ಅವರು ತಮ್ಮ ಆಡಳಿತ ಆರಂಭವಾದ 2021ರ ಜನವರಿ 20ರಂದು ಸುಲ್ಲಿವಾನ್ (48) ಅವರನ್ನು ರಾಷ್ಟ್ರೀಯ ಭದ್ರತಾ ಸಲಹೆಗಾರರನ್ನಾಗಿ ನೇಮಿಸಿದ್ದರು. ಅವರು ದೇಶದ ಅತಿ ಕಿರಿಯ ರಾಷ್ಟ್ರೀಯ ಭದ್ರತಾ ಸಲಹೆಗಾರ ಎಂದೆನ್ನಿಸಿದ್ದರು.
ಬೈಡನ್ ಆಡಳಿತದ ಜತೆ ಅಧಿಕಾರದಿಂದ ತಾವು ನಿರ್ಗಮಿಸುವ ದಿನವೂ ಸಮೀಪಿಸುತ್ತಿರುವ ವೇಳೆ ಅವರು ಭಾರತಕ್ಕೆ ಪ್ರವಾಸ ಕೈಗೊಂಡಿದ್ದಾರೆ. ಈ ವೇಳೆ ಅವರು ನವದೆಹಲಿಯ ಐಐಟಿಯಲ್ಲಿ ಭಾರತ- ಕೇಂದ್ರಿತ ವಿದೇಶಾಂಗ ನೀತಿ ಕುರಿತು ಭಾಷಣ ಮಾಡಲಿದ್ದಾರೆ.
ಬಳಿಕ ಅವರು ಅಜಿತ್ ಡೋಭಾಲ್, ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಮತ್ತು ಇತರ ಹಿರಿಯ ನಾಯಕರ ಜತೆಗೆ ಚರ್ಚೆಗಳನ್ನು ನಡೆಸಲಿದ್ದಾರೆ.
ಭಾರತದೊಂದಿಗೆ ಪಾಲುದಾರಿಕೆಯ ವಿಸ್ತರಣೆ, ಬಾಹ್ಯಾಕಾಶ, ರಕ್ಷಣೆ, ತಂತ್ರಜ್ಞಾನ ಸೇರಿದಂತೆ ಇಂಡೋ-ಪೆಸಿಫಿಕ್ ವಿಷಯಗಳ ಕುರಿತು ಅವರು ಮಾತುಕತೆ ನಡೆಸಲಿದ್ದಾರೆ ಎಂದು ಶ್ವೇತಭವನದ ರಾಷ್ಟ್ರೀಯ ಭದ್ರತಾ ಸಂವಹನ ಸಲಹೆಗಾರ ಜಾನ್ ಕಿರ್ಬಿ ಮಾಹಿತಿ ನೀಡಿದ್ದಾರೆ.