ಕೊಲಂಬೊ: ಶ್ರೀಲಂಕಾ ಜಲ ಗಡಿಯೊಳಗೆ ಮೀನುಗಾರಿಕೆ ನಡೆಸುತ್ತಿದ್ದ ಭಾರತದ 13 ಮೀನುಗಾರರನ್ನು ಬಂಧಿಸುವ ವೇಳೆ ಶ್ರೀಲಂಕಾ ನೌಕಾ ಪಡೆ ಸಿಬ್ಬಂದಿಯೊಬ್ಬರ ಬಂದೂಕಿನಿಂದ ಆಕಸ್ಮಿಕವಾಗಿ ಗುಂಡು ಹಾರಿದ್ದು, ಇಬ್ಬರು ಮೀನುಗಾರರ ಸ್ಥಿತಿ ಗಂಭೀರವಾಗಿದೆ.
ಶ್ರೀಲಂಕಾ ನೌಕಾ ಪಡೆಯ ವೈಸ್ ಅಡ್ಮಿರಲ್ ಕಾಂಚನ ಬನಗೋಡಾ ಅವರು ಬುಧವಾರ ಪತ್ರಿಕಾಗೋಷ್ಠಿ ನಡೆಸಿ ಈ ಮಾಹಿತಿ ನೀಡಿದರು.
ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮೀನುಗಾರರ ಆರೋಗ್ಯವನ್ನು ಶ್ರೀಲಂಕಾದಲ್ಲಿರುವ ರಾಯಭಾರ ಕಚೇರಿಯ ಅಧಿಕಾರಿಗಳು ವಿಚಾರಿಸಿದರು. ಕೊಲಂಬೊದಲ್ಲಿರುವ ಭಾರತದ ಹೈಕಮಿಷನ್ ಅಲ್ಲಿನ ವಿದೇಶಾಂಗ ಸಚಿವರಲ್ಲಿ ತನ್ನ ಅಸಮಾಧಾನವನ್ನು ದಾಖಲಿಸಿದೆ. ಜೊತೆಗೆ, ನವದೆಹಲಿಯಲ್ಲಿರುವ ಶ್ರೀಲಂಕಾ ಹೈಕಮಿಷನರ್ ಅವರನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕಚೇರಿಗೆ ಕರೆಸಿ ಭಾರತವು ತನ್ನ ಪ್ರತಿಭಟನೆಯನ್ನು ದಾಖಲಿಸಿದೆ.
ಭಾರತದ 13 ಮೀನುಗಾರರನ್ನು ಜ.27ರಂದು ವೆಲ್‌ವೆಟ್ಟಿತುರೈ ಕರಾವಳಿ ಪ್ರದೇಶದಲ್ಲಿ ಬಂಧಿಸಲಾಯಿತು. ಫೆ.10ರವರೆಗೆ ಇವರನ್ನು ಪೊಲೀಸರ ವಶಕ್ಕೆ ನೀಡಲಾಗಿದೆ.