ಮುಂಬೈ: ಲಂಚದ ಆರೋಪದ ಅಡಿಯಲ್ಲಿ ಇ.ಡಿ. ಅಧಿಕಾರಿಯೊಬ್ಬರನ್ನು ಬಂಧಿಸುವ ಸಂದರ್ಭದಲ್ಲಿ ಸಿಬಿಐ ಅಧಿಕಾರಿಗಳು 'ಹಲವು ಮಹತ್ವದ, ಮೂಲಭೂತ ಲೋಪಗಳನ್ನು ಎಸಗಿದ್ದಾರೆ' ಎಂದು ಹೇಳಿರುವ ವಿಶೇಷ ನ್ಯಾಯಾಲಯವು, ಬಂಧಿತ ಇ.ಡಿ. ಅಧಿಕಾರಿಯನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ಆದೇಶಿಸಿದೆ.
ಇ.ಡಿಯ ಶಿಮ್ಲಾ ಘಟಕದ ಸಹಾಯಕ ನಿರ್ದೇಶಕ ವಿಶಾಲ್ ದೀಪ್ ಅವರನ್ನು ಇನ್ನೊಂದು ರಾಜ್ಯಕ್ಕೆ ಕರೆದೊಯ್ಯಲು ಅನುಮತಿ ನೀಡುವಂತೆ ಸಿಬಿಐ ಮಾಡಿದ್ದ ಮನವಿಯನ್ನು ತಿರಸ್ಕರಿಸಿರುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ವಿ.ವೈ. ಫಾಡ್ ಅವರು, ವಿಶಾಲ್ ವಿರುದ್ಧದ ಆರೋಪಗಳು ಗಟ್ಟಿಯಾದ ಆಧಾರಗಳನ್ನು ಹೊಂದಿಲ್ಲ ಎಂದು ಹೇಳಿದ್ದಾರೆ.
ಸಿಬಿಐನ ಚಂಡೀಗಢ ಘಟಕದ ಅಧಿಕಾರಿಗಳು ವಿಶಾಲ್ ಅವರನ್ನು ಭ್ರಷ್ಟಾಚಾರದ ಆರೋಪದ ಅಡಿಯಲ್ಲಿ ಮುಂಬೈನಲ್ಲಿ ಮಂಗಳವಾರ ಬಂಧಿಸಿದ್ದರು. ಇ.ಡಿ ತನಿಖೆ ನಡೆಸುತ್ತಿರುವ ಹಣದ ಅಕ್ರಮ ವರ್ಗಾವಣೆ ಪ್ರಕರಣವೊಂದರಲ್ಲಿ ಬಂಧಿಸಬಾರದು ಎಂದಾದರೆ ₹1.1 ಕೋಟಿ ಲಂಚ ಕೊಡಬೇಕು ಎಂದು ವಿಶಾಲ್ ಅವರು ಕಂಪನಿಯೊಂದರ ಮುಖ್ಯಸ್ಥರ ಬಳಿ ಬೇಡಿಕೆ ಇರಿಸಿದ್ದರು ಎಂದು ಸಿಬಿಐ ಹೇಳಿದೆ.
'ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಸೆಕ್ಷನ್ 192ರ ಅನ್ವಯ ಕೇಸ್ ಡೈರಿಯನ್ನು ನಿರ್ವಹಿಸಬೇಕು, ಅದನ್ನು ಸಲ್ಲಿಸಬೇಕು. ಆದರೆ ಸಹಾಯಕ ತನಿಖಾಧಿಕಾರಿಯು ಪೂರಕ ಕೈಸ್ ಡೈರಿಯನ್ನು ಇಟ್ಟಿಲ್ಲ, ಅದನ್ನು ಕೋರ್ಟ್‌ಗೆ ಸಲ್ಲಿಸಿಲ್ಲ. ಇದು ಗಂಭೀರವಾದ ಲೋಪ' ಎಂದು ನ್ಯಾಯಾಧೀಶರು ಹೇಳಿದ್ದಾರೆ.
ಆರೋಪಿಗೆ ಬಂಧನದ ವಾರಂಟ್ ನೀಡಿರಲಿಲ್ಲವಾದ ಕಾರಣ, ಸಿಬಿಐ ಸಲ್ಲಿಸಿರುವ ಮನವಿಯ ಪ್ರಕ್ರಿಯೆಯು ದೋಷಯುಕ್ತವಾದಂತೆ ಆಗಿದೆ ಎಂದು ನ್ಯಾಯಾಲಯ ಹೇಳಿದೆ. 'ಈ ಎಲ್ಲ ಸಂಗತಿಗಳು ಪ್ರಾಸಿಕ್ಯೂಷನ್‌ನ ಕೃತ್ಯಗಳಲ್ಲಿ ಲೋಪಗಳು ಆಗಿರುವುದನ್ನು ತೋರಿಸುತ್ತವೆ. ಹೀಗಾಗಿ ಬಂಧನವು ಅಕ್ರಮವಾಗುತ್ತದೆ' ಎಂದು ಕೂಡ ಅದು ಹೇಳಿದೆ.