ಸುಲ್ತಾನಪುರ :ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧ ದಾಖಲಾಗಿರುವ ಮಾನನಷ್ಟ ಪ್ರಕರಣವೊಂದರ ವಿಚಾರಣೆಯನ್ನು ಇಲ್ಲಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಗುರುವಾರ ನಡೆಸಿತು.
ರಾಹುಲ್ ಅವರು 2018ರ ಕರ್ನಾಟಕ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಬಗ್ಗೆ ಆಕ್ಷೇಪಾರ್ಹ ಮಾತುಗಳನ್ನು ಆಡಿದ್ದಾರೆ ಎಂದು ಆರೋಪಿಸಲಾಗಿದೆ.
ಗುರುವಾರದ ವಿಚಾರಣೆ ಸಂದರ್ಭದಲ್ಲಿ ದೂರುದಾರ, ಬಿಜೆಪಿ ಮುಖಂಡ ವಿಜಯ್ ಮಿಶ್ರಾ ಅವರನ್ನು ಪಾಟೀಸವಾಲಿಗೆ ಗುರಿಪಡಿಸಲಾಯಿತು.
'ದೂರುದಾರ ಮಿಶ್ರಾ ಅವರಿಗೆ ಪ್ರಶ್ನೆಗಳನ್ನು ಪೂರ್ತಿಯಾಗಿ ಕೇಳಲು ಆಗದ ಕಾರಣ ಜನವರಿ 10ಕ್ಕೆ ಮುಂದಿನ ವಿಚಾರಣೆಯನ್ನು ನಿಗದಿಪಡಿಸಲಾಗಿದೆ' ಎಂದು ರಾಹುಲ್ ಅವರ ವಕೀಲ ಕಾಶಿ ಪ್ರಸಾದ್ ಶುಕ್ಲಾ ತಿಳಿಸಿದರು. ರಾಹುಲ್ ಅವರು ಶಾ ಅವರನ್ನು ಗುರಿಯಾಗಿಸಿ ಆಡಿದ ಮಾತು ತಮ್ಮನ್ನು ಬಹಳ ನೋಯಿಸಿದೆ ಎಂದು ಮಿಶ್ರಾ ಹೇಳಿದ್ದಾರೆ.