ಪಟ್ನಾ: ಬಿಹಾರ ಲೋಕಸೇವಾ ಆಯೋಗ(ಬಿಪಿಎಸ್‌ಸಿ) ಡಿಸೆಂಬರ್ 13ರಂದು ನಡೆಸಿದ್ದ ಪರೀಕ್ಷೆಯನ್ನು ರದ್ದುಪಡಿಸಲು ಒತ್ತಾಯಿಸಿ 'ಜನ ಸೂರಜ್' ಪಕ್ಷದ ಸ್ಥಾಪಕ ಪ್ರಶಾಂತ್ ಕಿಶೋರ್ ಗುರುವಾರ ಇಲ್ಲಿನ ಗಾಂಧಿ ಮೈದಾನದಲ್ಲಿ ಆಮರಣ ನಿರಶನವನ್ನು ಆರಂಭಿಸಿದರು.
ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಕಿಶೋರ್, ಪರೀಕ್ಷೆಯನ್ನು ರದ್ದುಗೊಳಿಸಿ ಮರು ಪರೀಕ್ಷೆ ನಡೆಸಬೇಕೆಂಬುವುದು ನನ್ನ ಬೇಡಿಕೆಯಾಗಿದೆ.
ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆಯೂ ನಾನು ಆಗ್ರಹಿಸುತ್ತೇನೆ' ಎಂದರು.
'ಈಗಿನಂತೆ ಬಹಳ ಹಿಂದಿನಿಂದಲೂ ರಾಜ್ಯದ ಯುವ ಜನತೆಗೆ ಅನ್ಯಾಯವಾಗುತ್ತಾ ಬಂದಿದೆ. ಚುನಾವಣೆಗೆ ಮುನ್ನ ರಾಜ್ಯ ಪ್ರವಾಸ ಮಾಡಿದ್ದ ನಿತೀಶ್ ಕುಮಾರ್ ನಿರುದ್ಯೋಗ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದರು. ಆದರೆ, 20 ವರ್ಷದಲ್ಲಿ ಒಬ್ಬನೇ ಒಬ್ಬ ವ್ಯಕ್ತಿಗೆ ಯಾವುದೇ ಪ್ರಯೋಜನವಾಗಿಲ್ಲ. ರಾಜ್ಯ ಸರ್ಕಾರ ನಿರುದ್ಯೋಗ ಭತ್ಯೆ ಕೊಡಬೇಕು' ಎಂದು ಹೇಳಿದರು.
ಇದಕ್ಕೆ ಮುನ್ನ, ಪ್ರಶ್ನೆಪತ್ರಿಕೆ ಸೋರಿಕೆ ಆರೋಪ ಹಾಗೂ ಪರೀಕ್ಷಾರ್ಥಿಗಳ ಆತಂಕ ಆಧರಿಸಿ ಅವರು, ಪರೀಕ್ಷೆ ರದ್ದುಪಡಿಸಲು ನಿತೀಶ್ ಕುಮಾರ್ ನೇತೃತ್ವದ ಸರ್ಕಾರಕ್ಕೆ '48 ಗಂಟೆ' ಗಡುವು ನೀಡಿದ್ದರು.
ಹಿನ್ನೆಲೆ?
ಡಿಸೆಂಬರ್ 13ರಂದು ನಡೆದ 70ನೇ ಬಿಪಿಎಸ್‌ಸಿ ಕಂಬೈನ್ಡ್ ನೇಮಕಾತಿ ಪರೀಕ್ಷೆಯ (ಸಿಸಿಇ) ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಪರೀಕ್ಷೆ ರದ್ದುಗೊಳಿಸುವಂತೆ ಆಗ್ರಹಿಸಿ ನೂರಾರು ಅಭ್ಯರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ.
ಭಾನುವಾರ ಗಾಂಧಿ ಮೈದಾನದಿಂದ ಮುಖ್ಯಮಂತ್ರಿ ನಿವಾಸ ಕಡೆಗೆ ಮೆರವಣಿಗೆ ಮಾಡುವಾಗ ಪ್ರತಿಭಟನಕಾರರು ಮತ್ತು ಪೊಲೀಸರ ನಡುವೆ ಘರ್ಷಣೆ ನಡೆದಿದೆ. ಪೊಲೀಸರು ಪ್ರತಿಭಟನಕಾರರ ಮೇಲೆ ಲಾಠಿ ಚಾರ್ಜ್ ಮಾಡಿದ್ದರು.
ಏತನ್ಮಧ್ಯೆ, ಪ್ರತಿಭಟನಾ ನಿರತ ಅಭ್ಯರ್ಥಿಗಳಿಗೆ ಪ್ರಚೋದನೆ ನೀಡಿದ್ದಾರೆ ಎಂಬ ಆರೋಪ ಮೇಲೆ ಪ್ರಶಾಂತ್ ಕಿಶೋರ್ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.