ಲಾಸ್ ಏಂಜಲೀಸ್: ಕ್ಯಾಲಿಫೋರ್ನಿಯಾ ರಾಜ್ಯದ ಲಾಸ್ ಏಂಜಲೀಸ್ ನಗರದ ಐದು ಕಡೆಗಳಲ್ಲಿ ಕಾಳ್ಗಿಚ್ಚು ಉರಿಯುತ್ತಿದೆ. 'ಸಂತಾ ಆನಾ' ಸುಂಟರ ಗಾಳಿಯು ತನ್ನ ವೇಗವನ್ನು ತಗ್ಗಿಸಿಕೊಳ್ಳುತ್ತಿಲ್ಲ. 'ಭಾನುವಾರದ ನಂತರ ಮುಂದಿನ ವಾರದಲ್ಲಿ ಗಾಳಿಯು ತನ್ನ ರೌದ್ರಾವತಾರವನ್ನು ಮತ್ತೊಮ್ಮೆ ಪ್ರದರ್ಶಿಸಲಿದೆ.
ಹಾಲಿವುಡ್ ಹಿಲ್ಸ್‌ನಲ್ಲಿ ಎದ್ದಿದ್ದ ಕಾಳ್ಗಿಚ್ಚನ್ನು ಸಂಪೂರ್ಣವಾಗಿ ನಂದಿಸಲಾಗಿದೆ. ಆದರೆ, ಬಾಕಿ ಎಲ್ಲ ಕಡೆಗಳಲ್ಲಿಯೂ ಮೂರು-ನಾಲ್ಕು ದಿನಗಳಿಂದ ಬೆಂಕಿ ಉರಿಯುತ್ತಲೇ ಇದೆ. ರಿಯಲ್ ಎಸ್ಟೇಟ್‌ಗೆ, ಸಮುದ್ರದತ್ತ ಮುಖ ಮಾಡಿರುವ ಕೋಟಿಗಟ್ಟಲೆ ಬೆಲೆ ಬಾಳುವ ಬಂಗಲೆಗಳಿಗೆ ಪ್ರಸಿದ್ಧವಾಗಿರುವ ಪೆಸಿಫಿಕ್ ಪ್ಯಾಲಿಸೈಡ್ಸ್ ಹಾಗೂ ಇದರ ಪಕ್ಕದ ಮಲಿಬು ನಗರದ ಹಲವು ಪ್ರದೇಶಗಳಲ್ಲಿ ಈಗ ಉಳಿದಿರುವುದು ಭಸ್ಮ ಮಾತ್ರ.
ಸಾವಿರಾರು ಜನರನ್ನು ಸ್ಥಳಾಂತರಿಸಲಾಗಿದೆ. ಈ ಮನೆಗಳಿಗೆ ಈಗ ಕಳ್ಳರ ಕಾಟ ಆರಂಭವಾಗಿದೆ. ಮೂರು-ನಾಲ್ಕು ದಿನಗಳಲ್ಲಿ ಈ ಎಲ್ಲ ಪ್ರದೇಶಗಳಲ್ಲಿ ಒಟ್ಟು 20 ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ. ಈ ಪ್ರದೇಶಗಳ ಭದ್ರತೆಯನ್ನು ಹೆಚ್ಚಿಸಲಾಗಿದೆ.
'ಸರ್ಕಾರವು ಶ್ರೀಮಂತರಿಗೆ ಮಾತ್ರವೇ ಸಹಕಾರ ನೀಡಲಿದೆ' ಎಂದು ಬಡ ಅಮೆರಿಕನ್ನರು ಆರೋಪಿಸುತ್ತಿದ್ದಾರೆ. 'ಮಂಗಳವಾರ ಬೆಂಕಿ ಬಿದ್ದಾಗ ನಮ್ಮ ಮನೆಗಳ ಬಳಿ ಎಲ್ಲಿಯೂ ಅಗ್ನಿಶಾಮಕ ದಳದ ಸಿಬ್ಬಂದಿ ಕಾಣಸಿಲಿಲ್ಲ. ಶ್ರೀಮಂತರ ಮನೆಗಳ ಬಳಿಯೇ ಇದ್ದರು' ಎಂದು ಅಲ್ಟಡೀನಾ ನಗರ ನಿವಾಸಿಗಳು ಆರೋಪಿಸಿದ್ದಾರೆ. 'ಬೆಂಕಿಯಿಂದಲೇ ನಮ್ಮ ಮನೆಗೆ ಹಾನಿಯಾಗಿದೆ ಎಂಬ ಸಾಕ್ಷ್ಯವನ್ನು ವಿಮಾ ಕಂಪನಿಗಳಿಗೆ ತೋರಿಸುವುದು, ಅವರಿಗೆ ಮನವರಿಕೆ ಮಾಡಿಕೊಡುವುದು ಹೇಗೆ ಎಂದು ತೋಚುತ್ತಿಲ್ಲ' ಎಂದು ಬಡ ಅಮೆರಿಕನ್ನರು ಹೇಳುತ್ತಿದ್ದಾರೆ.
ಆಧಾರ: ಎಪಿ, ರಾಯಿಟರ್ಸ್, ಲಾಸ್ ಎಂಜಲೀಸ್ ಅಗ್ನಿಶಾಮಕ ಇಲಾಖೆ ವೆಬ್‌ಸೈಟ್
ಮಲಿಬು ನಗರದಲ್ಲಿರುವ ಸಮುದ್ರಕ್ಕೆ ಮುಖ ಮಾಡಿರುವ ಕೋಟಿಗಟ್ಟಲೆ ಬೆಲೆ ಬಾಳುವ ಬಂಗಲೆಗಳು ಕಾಳ್ಗಿಚ್ಚಿಗೆ ಭಸ್ಮವಾಗಿವೆ
10;ಕಾಳ್ಗಿಚ್ಚಿನಿಂದ ಮೃತಪಟ್ಟ ಜನರ ಸಂಖ್ಯೆ (ಸಾವಿನ ಸಂಖ್ಯೆ ಏರಿಕೆಯಾಗಬಹುದು ಎಂದು ಲಾಸ್ ಏಂಜಲೀಸ್ ನಗರದ ಅಧಿಕಾರಿಗಳು ಹೇಳಿದ್ದಾರೆ)
'ಹವಾಮಾನ ಬದಲಾವಣೆಯಿಂದಾಗಿ ಇಂಥದ್ದೊಂದು ಪ್ರಾಕೃತಿಕ ದುರಂತ ಸಂಭವಿಸುತ್ತಿದೆ' ಎಂದು ಹವಾಮಾನ ತಜ್ಞರು ಹೇಳುತ್ತಿದ್ದಾರೆ. ಕಾಳ್ಗಿಚ್ಚು ಆರಂಭಗೊಂಡದ್ದು ಹೇಗೆ ಎನ್ನುವ ಬಗ್ಗೆ ಅಮೆರಿಕದಲ್ಲಿ ತಜ್ಞರ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿದೆ. 'ವೇಗವಾಗಿ ಗಾಳಿ ಬೀಸುತ್ತಿತ್ತು. ವಿದ್ಯುತ್ ತಂತಿಗಳು ತಾಗಿ ಕಿಡಿ ಹೊತ್ತಿಕೊಂಡಿರಬಹುದು' ಎಂದು ಅಗ್ನಿಶಾಮಕ ದಳದ ಹಿರಿಯ ಅಧಿಕಾರಿಗಳು ಅಂದಾಜಿಸುತ್ತಿದ್ದಾರೆ. ಇನ್ನೊಂದು ಕಡೆ, ಅಮೆರಿಕದ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ ಪೋಸ್ಟ್ ಹಂಚಿಕೊಂಡಿದ್ದು, 'ಅಸಮರ್ಥ ಗವರ್ನರ್‌ನಿಂದ ಸಬೂಬುಗಳನ್ನು ಕೇಳಲು ಸಾಧ್ಯವಿಲ್ಲ. ಇದಕ್ಕೆಲ್ಲಾ ಕಾಲ ಮಿಂಚಿ ಹೋಗಿದೆ' ಎಂದಿದ್ದಾರೆ. 'ದುರಂತದ ಸಂದರ್ಭದಲ್ಲಿ ಟ್ರಂಪ್ ಅವರು ಸಹಾನುಭೂತಿ ವ್ಯಕ್ತಪಡಿಸುವ ಬದಲು ಕ್ಯಾಲಿಫೋರ್ನಿಯಾದ ಗವರ್ನರ್ ಡೆಮಾಕ್ರಟಿಕ್ ಪಕ್ಷದ ಗ್ಯಾವನ್ ನ್ಯೂಸಂ ಅವರ ವಿರುದ್ಧ ರಾಜಕೀಯ ಹೇಳಿಕೆ ನೀಡುತ್ತಿದ್ದಾರೆ' ಎಂಬ ಚರ್ಚೆ ಆರಂಭವಾಗಿದೆ.