ಗುವಾಹಟಿ: ಬಾಂಗ್ಲಾದೇಶದಿಂದ 'ಅಲ್ಲಿನ ಬಹುಸಂಖ್ಯಾತರೇ' ಅಸ್ಸಾಂಗೆ ಅಕ್ರಮವಾಗಿ ನುಸುಳುತ್ತಿದ್ದಾರೆ ಹೊರತು ಅಲ್ಪಸಂಖ್ಯಾತ ಹಿಂದೂಗಳಲ್ಲ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಬುಧವಾರ ಹೇಳಿದ್ದಾರೆ.
'ಬಾಂಗ್ಲಾದೇಶದಲ್ಲಿ ಬಿಕ್ಕಟ್ಟು ಉಂಟಾದ ಬಳಿಕ ಅಲ್ಲಿನ ಜವಳಿ ಉದ್ಯಮ ಸಂಕಷ್ಟಕ್ಕೀಡಾಗಿದೆ.
ಹೀಗಾಗಿ, ಬಾಂಗ್ಲಾದಲ್ಲಿ ಬಹುಸಂಖ್ಯಾತರಾಗಿರುವ, ಆದರೆ ಭಾರತದಲ್ಲಿ ಅಲ್ಪಸಂಖ್ಯಾತರಾಗಿರುವ 'ಸಮುದಾಯ'ದ ಕಾರ್ಮಿಕರು ಭಾರತಕ್ಕೆ ಅಕ್ರಮವಾಗಿ ವಲಸೆ ಬಂದು, ತಮಿಳುನಾಡಿನಲ್ಲಿ ನೆಲೆ ಕಂಡುಕೊಳ್ಳಲು ಮುಂದಾಗಿದ್ದಾರೆ. ಕಡಿಮೆ ವೇತನಕ್ಕೆ ಕಾರ್ಮಿಕರು ಸಿಗುತ್ತಾರೆಂದು ತಮಿಳುನಾಡಿನ ಜವಳಿ ಉದ್ಯಮಗಳ ಮಾಲೀಕರೂ ಇದಕ್ಕೆ ಸಹಕಾರ ನೀಡುತ್ತಿದ್ದಾರೆ' ಎಂದು ಶರ್ಮಾ ಅವರು ದೂರಿದ್ದಾರೆ.
'ಇದಕ್ಕೆ ವ್ಯತಿರಿಕ್ತವೆಂಬಂತೆ, ಅಲ್ಲಿನ ಅಲ್ಪಸಂಖ್ಯಾತ ಹಿಂದೂಗಳು ದಬ್ಬಾಳಿಕೆಗೆ ಒಳಗಾಗಿದ್ದರೂ ದೇಶವನ್ನು ತೊರೆದು ಭಾರತಕ್ಕೆ ಬಂದಿಲ್ಲ. ಇದು ಅವರ ಅಚ್ಚಳಿಯದ ದೇಶಪ್ರೇಮದ ಪ್ರತೀಕವಾಗಿದೆ' ಎಂದು ಶರ್ಮಾ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಬಾಂಗ್ಲಾದೇಶದಲ್ಲಿ ಹಿಂದೂಗಳಿಗೆ ಅನುಕೂಲಕರ ವಾತಾವರಣ ಕಲ್ಪಿಸಲು ಶ್ರಮಿಸುತ್ತಿದ್ದಾರೆ. ಬಾಂಗ್ಲಾದಲ್ಲಿ ಪರಿಸ್ಥಿತಿ ಪ್ರಕ್ಷುಬ್ಧವಾಗಿದ್ದು, ಕೇಂದ್ರ ಸರ್ಕಾರವು ಈ ಬಗ್ಗೆ ಜಾಗೃತವಾಗಿದೆ ಎಂದೂ ಅವರು ಹೇಳಿದ್ದಾರೆ.
'ಬಾಂಗ್ಲಾ ಬಿಕ್ಕಟ್ಟಿನ ಬಳಿಕ, ಅಲ್ಲಿನ ಜನರು ಭಾರತಕ್ಕೆ ಅಕ್ರಮವಾಗಿ ನುಸುಳುವ ಪ್ರವೃತ್ತಿ ಹೆಚ್ಚಾಗಿದೆ. ಕಳೆದ 5 ತಿಂಗಳುಗಳಲ್ಲಿ ಪ್ರತಿ ದಿನ 20ರಿಂದ 30 ಬಾಂಗ್ಲಾ ಪ್ರಜೆಗಳು ಅಸ್ಸಾಂ ಮತ್ತು ತ್ರಿಪುರಾಗಳಿಗೆ ಒಳನುಸುಳಲು ಯತ್ನಿಸಿದ್ದು, ಅಸ್ಸಾಂ ಸರ್ಕಾರವು ಅವರನ್ನು ಬಂಧಿಸದೆ, ತಮ್ಮ ದೇಶಕ್ಕೆ ಮರಳುವಂತೆ ಮಾಡಿದೆ ಎಂದು ತಿಳಿಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೂ ಈ ಬಗ್ಗೆ ಚರ್ಚಿಸಲಾಗಿದೆ ಎಂದೂ ಅವರು ಹೇಳಿದ್ದಾರೆ.