ವಯನಾಡ್: ಹುಲಿ ದಾಳಿಯಿಂದ ಮೃತಪಟ್ಟ ಮಹಿಳೆಯ ಕುಟುಂಬವನ್ನು ಭೇಟಿಯಾಗಲು ವಯನಾಡ್‌ನ ಮನಂತವಾಡಿ ಗ್ರಾಮಕ್ಕೆ ತೆರಳಿದ್ದ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿಗೆ ಸಿಪಿಐ (ಎಂ) ಕಾರ್ಯಕರ್ತರು ಕಪ್ಪು ಬಾವುಟ ತೋರಿದ್ದಾರೆ.
ತಾವು ಗೆದ್ದ ಕ್ಷೇತ್ರದಲ್ಲಿ ಹುಲಿ ದಾಳಿಯಿಂದ ಮಹಿಳೆಯೊಬ್ಬರು ಮೃತಪಟ್ಟಿದ್ದರೂ ತಡವಾಗಿ ಕ್ಷೇತ್ರಕ್ಕೆ ಆಗಮಿಸಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿರುವ ಸಿಪಿಐ (ಎಂ) ಕಾರ್ಯಕರ್ತರು ಪ್ರಿಯಾಂಕಾ ಸಾಗುವ ದಾರಿಯಲ್ಲಿ ಕಪ್ಪು ಬಾವುಟ ತೋರಿಸಿ, ವಾಪಸ್ ಹೊರಡಿ ಎಂದು ಕೂಗಿದ್ದಾರೆ.
ಮಂಗಳವಾರ ಮಧ್ಯಾಹ್ನ ಪ್ರಿಯಾಂಕಾ ಅವರು ಸಂತ್ರಸ್ಥರ ಮನೆಗೆ ತೆರಳಿ ಸಾಂತ್ವನ ಹೇಳಿದ್ದಾರೆ.
ಜನವರಿ 24 ರಂದು ವಯನಾಡ್‌ನ ಮಾನಂತವಾಡಿ ಗ್ರಾಮದ ಪ್ರಿಯದರ್ಶಿನಿ ಎಸ್ಟೇಟ್‌ಗೆ ಕಾಫಿ ಕೊಯ್ಯಲು ಹೊರಟಿದ್ದ ರಾಧಾ ಎನ್ನುವ ಮಹಿಳೆ ಮೇಲೆ ಹುಲಿ ದಾಳಿ ಮಾಡಿದ್ದು, ಅವರು ಸ್ಥಳದಲ್ಲೇ ಮೃತಪಟ್ಟಿದ್ದರು. ಘಟನೆ ನಡೆದ ಕೂಡಲೇ ಸ್ಥಳೀಯರು ಪ್ರತಿಭಟಿಸಿದ್ದು, ಮಹಿಳೆಯ ಶವವನ್ನು ಮರಣೋತ್ತರ ಪರೀಕ್ಷೆಗೆ ತೆಗೆದುಕೊಂಡು ಹೋಗುವುದನ್ನು ತಡೆದಿದ್ದರು. ಬಳಿಕ ಘಟನಾ ಸ್ಥಳಕ್ಕೆ ಧಾವಿಸಿದ್ದ ಅಧಿಕಾರಿಗಳು ಹುಲಿಯನ್ನು ಸೆರೆಹಿಡಿಯಲಾಗುವುದು ಅಥವಾ ಕೊಲ್ಲಲಾಗುವುದು ಎಂದು ಭರವಸೆ ನೀಡಿದ್ದರು.
ಬಳಿಕ ಮಹಿಳೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಕುತ್ತಿಗೆಯ ಬಳಿ ಹುಲಿ ತೀವ್ರವಾಗಿ ದಾಳಿ ಮಾಡಿದ್ದ ಪರಿಣಾಮ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿತ್ತು.