ನವದೆಹಲಿ: ಕೇಂದ್ರ ಪೊಲೀಸ್ ಮೀಸಲು ಪಡೆಯಿಂದ (ಸಿಆರ್‌ಪಿಎಫ್) ನಿವೃತ್ತ ನಾಯಿಗಳನ್ನು ದತ್ತು ಪಡೆಯಲು ಇದೇ ಮೊದಲ ಬಾರಿಗೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ.
ನಾಯಿಗಳನ್ನು ದತ್ತು ಪಡೆಯಲು ಬಯಸುವವರು ವೆಬ್‌ಸೈಟ್‌ನಲ್ಲಿ ಉಚಿತವಾಗಿ ನೋಂದಣಿ ಮಾಡಿಕೊಳ್ಳಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯಾವುದೇ ಭದ್ರತಾ ಪಡೆಗಳು ತರಬೇತಿ ಪಡೆದ ನಾಯಿಗಳನ್ನು ಸಾರ್ವಜನಿಕರಿಗೆ ದತ್ತು ನೀಡಲು ನಿರ್ಧರಿಸಿರುವುದು ಇದೇ ಮೊದಲು. ಹೆಚ್ಚು ಕುಶಲತೆ ಹೊಂದಿರುವ ನಾಯಿಗಳನ್ನು ದೇಶ ವಿರೋಧಿ ಚಟುವಟಿಕೆಗಳಿಗೆ ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಹಿನ್ನಲೆಯಲ್ಲಿ ಈವರೆಗೆ ದತ್ತು ನೀಡುತ್ತಿರಲಿಲ್ಲ.
ಕೇಂದ್ರ ಪಡೆಗಳು ಮತ್ತು ರಾಜ್ಯ ಪೊಲೀಸ್ ಇಲಾಖೆಗಳಲ್ಲಿ ನಿವೃತ್ತ ನಾಯಿಗಳನ್ನು ಅವುಗಳ ಆರೈಕೆಗಾಗಿ ನೋಂದಾಯಿತ ಎನ್‌ಜಿಒ ಅಥವಾ ಪ್ರತಿಷ್ಠಿತ ಸಂಸ್ಥೆಗಳಿಗೆ ಹಸ್ತಾಂತರಿಸುತ್ತಿದ್ದರು.
ಬೆಲ್ಜಿಯನ್ ಶೆಫರ್ಡ್ ಮಾಲಿನೋಯಿಸ್, ಜರ್ಮನ್ ಶೆಫರ್ಡ್, ಲ್ಯಾಬ್ರಡಾರ್ ಸೇರಿದಂತೆ ಕೋರೆಹಲ್ಲುಗಳನ್ನು ಹೊಂದಿರುವ 30ಕ್ಕೂ ಹೆಚ್ಚು ಹಾಗೂ ಮುಧೋಳ ತಳಿಯ ನಾಲ್ಕು ನಾಯಿಗಳನ್ನು ದತ್ತು ಪಡೆಯಬಹುದಾಗಿದೆ.
8ರಿಂದ 12 ವರ್ಷ ವಯಸ್ಸಿನ ಈ ನಾಯಿಗಳನ್ನು ದೇಶದಾದ್ಯಂತ ನಕ್ಸಲ್ ನಿಗ್ರಹ ಪಡೆ, ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳಲ್ಲಿ ಬಳಸಲಾಗಿದೆ. ಜತೆಗೆ, ಕಟ್ಟಡದಲ್ಲಿ ಕಚ್ಚಾ ಬಾಂಬ್ (ಐಇಡಿ) ಪತ್ತೆ ಹಚ್ಚುವಲ್ಲಿ ಈ ನಾಯಿಗಳು ಪ್ರಮುಖ ಪಾತ್ರ ವಹಿಸಿವೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.