ನವದೆಹಲಿ: ದೆಹಲಿ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ಪಟ್ಟಿಯನ್ನು ಬಿಜೆಪಿ ದುರ್ಬಳಕೆ ಮಾಡಿಕೊಂಡಿದೆ ಎಂದು ಆರೋಪಿಸಿರುವ ಎಎಪಿ ಸಂಚಾಲಕ ಅರವಿಂದ ಕೇಜ್ರಿವಾಲ್, ಈ ಸಂಬಂಧ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.
ಚುನಾವಣಾ ಆಯೋಗದ ಅಧಿಕಾರಿಗಳನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, 'ಕಳೆದ 22 ದಿನಗಳಲ್ಲಿ ದೆಹಲಿ ವಿಧಾನಸಭೆ ಕ್ಷೇತ್ರದಲ್ಲಿ ಮತದಾರರ ಹೆಸರುಗಳನ್ನು ಅಳಿಸಲು ಸುಮಾರು 5,500 ಅರ್ಜಿಗಳನ್ನು ಸ್ವೀಕರಿಸಲಾಗಿದೆ.
ಈ ಕ್ಷೇತ್ರದಲ್ಲಿ ಸುಮಾರು ಒಂದು ಲಕ್ಷ ಮತದಾರರಿದ್ದಾರೆ. ಕೇವಲ 22 ದಿನಗಳಲ್ಲಿ ಶೇ 5.5ರಷ್ಟು ಮತದಾರರನ್ನು ತೆಗೆದುಹಾಕಲು ಅರ್ಜಿಗಳನ್ನು ಸ್ವೀಕರಿಸಲಾಗಿದೆ' ಎಂದು ಹೇಳಿದ್ದಾರೆ.
'ಬಿಜೆಪಿಗೆ ಸಂಬಂಧಿಸಿದ ಜನರು ಸುಮಾರು 13,000 ಹೊಸ ಮತದಾರರನ್ನು ಮತದಾರರ ಪಟ್ಟಿಗೆ ಸೇರಿಸಲು ಅರ್ಜಿ ಸಲ್ಲಿಸಿದ್ದಾರೆ. ಅಲ್ಲದೆ, ಅವರ ಪರವಾಗಿ ಮತ ಬರುವಂತೆ ಮಾಡಲು 5,500 ಮತದಾರರ ಹೆಸರುಗಳನ್ನು ರದ್ದುಗೊಳಿಸಲು ಪ್ರಯತ್ನಿಸಿದ್ದಾರೆ' ಎಂದು ಕೇಜ್ರಿವಾಲ್ ಆರೋಪಿಸಿದ್ದಾರೆ.
ದೆಹಲಿ ವಿಧಾನಸಭಾ ಚುನಾವಣೆ ಫೆಬ್ರುವರಿ 5ರಂದು ನಡೆಯಲಿದ್ದು, ಫೆ.8ಕ್ಕೆ ಮತ ಎಣಿಕೆ ನಡೆಯಲಿದೆ. ನಾಮಪತ್ರ ಸಲ್ಲಿಸಲು ಜನವರಿ 17 ಕೊನೆಯ ದಿನಾಂಕವಾಗಿದ್ದು, ಜನವರಿ 18 ರೊಳಗೆ ನಾಮಪತ್ರಗಳ ಪರಿಶೀಲನೆ ನಡೆಯಲಿದೆ.