ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಬಹುತೇಕ ಅಭ್ಯರ್ಥಿಗಳು 41-50 ವಯಸ್ಸಿನವರು ಎಂದು ಚುನಾವಣಾ ಹಕ್ಕುಗಳ ಸಂಸ್ಥೆ ಎಡಿಆರ್ ಹೇಳಿದೆ.
ಫೆಬ್ರುವರಿ 5ರಂದು ನಡೆಯಲಿರುವ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ವಯಸ್ಸು ಹಾಗೂ ಶೈಕ್ಷಣಿಕ ಅರ್ಹತೆಗಳ ಕುರಿತು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ತನ್ನ ವರದಿಯನ್ನು ಬಿಡುಗಡೆ ಮಾಡಿದೆ.
ಅಭ್ಯರ್ಥಿಗಳು ನಾಮಪತ್ರದಲ್ಲಿ ಸಲ್ಲಿಸಿದ ಅಫಿಡವಿಟ್ ಆ ಆಧರಿಸಿ ಈ ವರದಿ ಮಾಡಲಾಗಿದೆ.
2020ರ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ 672 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಈ ಬಾರಿ 699 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ವರದಿಯ ಪ್ರಕಾರ 2020ರಲ್ಲಿ 41-50 ವಯಸ್ಸಿನ 199 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. 2025ರಲ್ಲಿ ಅವರ ಸಂಖ್ಯೆ 235ಕ್ಕೆ ಏರಿಕೆಯಾಗಿದೆ.
70 ವರ್ಷಕ್ಕಿಂತ ಮೇಲ್ಪಟ್ಟ ಅಭ್ಯರ್ಥಿಗಳ ಸಂಖ್ಯೆಯಲ್ಲಿ ಗಮನಾರ್ಹ ಏರಿಕೆಯಾಗಿದೆ. 2020ರಲ್ಲಿ 11 ಮಂದಿ ಸ್ಪರ್ಧಿಸಿದ್ದರೆ, ಈ ಬಾರಿ 19 ಮಂದಿ ಕಣದಲ್ಲಿದ್ದಾರೆ.
25 ರಿಂದ 30ರ ನಡುವಿನ ವಯಸ್ಸಿನ ಅಭ್ಯರ್ಥಿಗಳ ಸಂಖ್ಯೆಯು 2020ರಲ್ಲಿ 57 ಇತ್ತು. ಈ ಬಾರಿ 46ಕ್ಕೆ ಇಳಿಕೆಯಾಗಿದೆ.
70 ಸದಸ್ಯ ಬಲದ ದೆಹಲಿ ವಿಧಾನಸಭೆಗೆ ಫೆಬ್ರುವರಿ 5ರಂದು ಮತದಾನ ನಡೆಯಲಿದೆ. ಫೆಬ್ರುವರಿ 8 ರಂದು ಮತ ಎಣಿಕೆ ಪ್ರಕ್ರಿಯೆ ನಡೆಯಲಿದೆ.