ಚೆನ್ನೈ: ಅಣ್ಣಾ ವಿಶ್ವವಿದ್ಯಾಲಯದಲ್ಲಿ ನಡೆದ ವಿದ್ಯಾರ್ಥಿನಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದ ಬಗ್ಗೆ ಡಿಎಂಕೆ ನಾಯಕಿಯರು ಮೌನವಹಿಸಿರುವುದೇಕೆ ಎಂದು ಬಿಜೆಪಿ ನಾಯಕಿ ಖುಷ್ಬೂ ಸುಂದರ್ ಪ್ರಶ್ನಿಸಿದ್ದಾರೆ.
ಈ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಡಿಎಂಕೆ ಸಂಸದೆ ಕನಿಮೋಳಿ ಎಲ್ಲಿದ್ದಾರೆ?' ಎಂದು ಕೇಳಿದ್ದಾರೆ.
'ಸಂತ್ರಸ್ತ ವಿದ್ಯಾರ್ಥಿನಿಯ ಬೆಂಬಲಕ್ಕೆ ಡಿಎಂಕೆ ನಾಯಕಿಯರು ಏಕೆ ಧ್ವನಿ ಎತ್ತುತ್ತಿಲ್ಲ?. ಅಣ್ಣಾ ವಿಶ್ವವಿದ್ಯಾಲಯದ ಪ್ರಕರಣದಲ್ಲಿ ಡಿಎಂಕೆ ನಾಯಕಿಯರು ಮೌನವಹಿಸಿರುವುದೇಕೆ? ಈ ಪ್ರಕರಣದಲ್ಲಿ ಪಕ್ಷವನ್ನು ಬದಿಗೊತ್ತಿ ಸಂತ್ರಸ್ತೆಯ ಬೆಂಬಲಕ್ಕೆ ನಿಂತು ನ್ಯಾಯಕ್ಕಾಗಿ ಹೋರಾಡಬೇಕಿತ್ತು' ಎಂದು ಹೇಳಿದ್ದಾರೆ.
'ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಲೈಂಗಿಕ ದೌರ್ಜನ್ಯ ಖಂಡಿಸಿ ಪ್ರತಿಭಟನೆ ನಡೆಸಲು ಇತರ ಪಕ್ಷಗಳಿಗೆ ಅನುಮತಿ ನಿರಾಕರಿಸಲಾಗುತ್ತಿದೆ. ಸಂತ್ರಸ್ತೆ ಪರ ನ್ಯಾಯಕ್ಕಾಗಿ ಪ್ರತಿಭಟನೆ ನಡೆಸಿದ ಬಿಜೆಪಿ ನಾಯಕಿ ತಮಿಳಿಸೈ ಸೌಂದರರಾಜನ್ ಮತ್ತು ಪಿಎಂಕೆ ನಾಯಕಿ ಸೌಮ್ಯಾ ಅನ್ಬುಮಣಿ ಅವರನ್ನು ಬಂಧಿಸಲಾಗಿದೆ' ಎಂದು ಕಿಡಿಕಾರಿದ್ದಾರೆ.
ಮುಂದುವರಿದು, 'ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ರಾಜಕೀಯಗೊಳಿಸಬಾರದು. ಇದು ವಿದ್ಯಾರ್ಥಿನಿಯ ಮನಸ್ಸಿನ ಮೇಲೆ ಬೀರುವ ಪ್ರಭಾವವನ್ನು ನಾವು ಮನಗಾಣಬೇಕಿದೆ. ಸಂತ್ರಸ್ತೆಗೆ ನ್ಯಾಯ ಒದಗಿಸಲು ನಾವೆಲ್ಲರೂ ಒಟ್ಟಾಗಿ ಹೋರಾಡಬೇಕು' ಎಂದು ಹೇಳಿದ್ದಾರೆ.
ಡಿಸೆಂಬರ್ 23ರಂದು ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ 19 ವರ್ಷದ ವಿದ್ಯಾರ್ಥಿನಿಯ ಮೇಲೆ ವ್ಯಕ್ತಿಗಳಿಬ್ಬರು ಲೈಂಗಿಕ ದೌರ್ಜನ್ಯ ನಡೆಸಿದ್ದು, ಆಕೆಯ ಸ್ನೇಹಿತನ ಮೇಲೂ ಹಲ್ಲೆ ನಡೆಸಿದ್ದರು. ಪ್ರಕರಣ ಸಂಬಂಧ ಇದುವರೆಗೆ ಒಬ್ಬನನ್ನು ಬಂಧಿಸಲಾಗಿದೆ.
ಏತನ್ಮಧ್ಯೆ, ಘಟನೆ ಖಂಡಿಸಿ ಜನವರಿ 3ರಂದು ಉಮಾರತಿ ರಾಜನ್ ಅವರ ನೇತೃತ್ವದಲ್ಲಿ ಮಧುರೈನಿಂದ ಚೆನ್ನೈವರೆಗೆ ನ್ಯಾಯ ರ್‍ಯಾಲಿ ನಡೆಸಲು ಬಿಜೆಪಿ ನಿರ್ಧರಿಸಿದೆ.