ವಾಷಿಂಗ್ಟನ್: ಹಿಂಸೆ, ಕಳ್ಳತನ ಸೇರಿದಂತೆ ಇತರ ಅಪರಾಧಗಳ ಆರೋಪಗಳನ್ನು ಎದುರಿಸುತ್ತಿರುವ ಅಕ್ರಮ ವಲಸಿಗರನ್ನು ಬಂಧಿಸುವ ಕುರಿತ ಮಸೂದೆಗೆ ಅಮೆರಿಕದ ಸಂಸತ್ತು ಬುಧವಾರ ಅಂತಿಮ ಅನುಮೋದನೆ ನೀಡಿದೆ.
ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಈ ಮಸೂದೆಗೆ ಸಹಿ ಹಾಕಿದ ಬಳಿಕ ಅದು ಕಾನೂನಾಗಲಿದೆ.
ರಿಪಬ್ಲಿಕನ್ ಸದಸ್ಯರೇ ಹೆಚ್ಚಿರುವ ಸದನದಲ್ಲಿ ಈ ಮಸೂದೆಗೆ ಹಲವು ಡೆಮಾಕ್ರಟಿಕ್ ಸದಸ್ಯರೂ ಬೆಂಬಲ ಸೂಚಿಸಿದ್ದು ವಿಶೆಷವಾಗಿತ್ತು.
ಇದು ಅಕ್ರಮ ವಲಸೆಯನ್ನು ತಡೆಯುವ ಟ್ರಂಪ್ ಅವರ ಯೋಜನೆಗಳಿಗೆ ಅನುಗುಣವಾಗಿದೆ. ವೆನೆಜುವೆಲಾದ ವ್ಯಕ್ತಿಯೊಬ್ಬರಿಂದ ಕಳೆದ ವರ್ಷ ಕೊಲೆಯಾದ ಜಾರ್ಜಿಯಾದ ನರ್ಸಿಂಗ್ ವಿದ್ಯಾರ್ಥಿ ಲೇಕನ್ ರಿಲೆ ಅವರ ಹೆಸರನ್ನು ಈ ಮಸೂದೆಗೆ ಇಡಲಾಗಿದೆ.
ಈ ಮಸೂದೆಯ ಪರ 263 ಮತ್ತು ವಿರುದ್ಧ 156 ಮತಗಳು ಚಲಾವಣೆಯಾದವು. ಡೆಮಾಕ್ರಟಿಕ್ ಪಕ್ಷದ 46 ಸದಸ್ಯರು ರಿಪಬ್ಲಿಕ್ ಪಕ್ಷವನ್ನು ಬೆಂಬಲಿಸಿದರು.