ನವದೆಹಲಿ: ಕೇಂದ್ರ ಸರ್ಕಾರ ಶುಕ್ರವಾರ ಬಿಡುಗಡೆ ಡಿಜಿಟಲ್ ವೈಯಕ್ತಿಕ ಮಾಹಿತಿ ಸಂರಕ್ಷಣಾ ಕಾಯ್ದೆಯ ಕರಡು ನಾಗರಿಕರ ಹಕ್ಕುಗಳನ್ನು ಸಂಪೂರ್ಣವಾಗಿ ರಕ್ಷಿಸುವ ಜೊತೆಗೆ ನಿಯಂತ್ರಣ ಮತ್ತು ನಾವೀನ್ಯತೆಯ ನಡುವೆ ಸಮತೋಲನವನ್ನು ಸೃಷ್ಟಿಸುತ್ತದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಶನಿವಾರ ಹೇಳಿದ್ದಾರೆ.
ಸಾರ್ವಜನಿಕರ ಅಹವಾಲು ಸ್ವೀಕಾರಕ್ಕೆ ಬಿಡುಗಡೆ ಮಾಡಲಾಗಿರುವ ಡಿಜಿಟಲ್ ವೈಯಕ್ತಿಕ ಡೇಟಾ ರಕ್ಷಣೆ(ಡಿಪಿಡಿಪಿ) ಕಾಯ್ದೆಯು ಫೆಬ್ರವರಿ 18ರ ನಂತರ ಅಂತಿಮ ಸ್ವರೂಪ ಪಡೆಯಲಿದೆ.
"ನಿಯಮಗಳು ಕಾಯಿದೆಯ ನಾಲ್ಕು ಗೋಡೆಗಳ ಒಳಗೆ ಇರಬೇಕು. ಇದು ಸಂಸತ್ತು ಅಂಗೀಕರಿಸಿದ ಕಾಯಿದೆಯ ವ್ಯಾಪ್ತಿಯಲ್ಲಿದೆ. ನಾಗರಿಕರ ಹಕ್ಕುಗಳನ್ನು ಸಂಪೂರ್ಣವಾಗಿ ರಕ್ಷಿಸುವ ಜೊತೆಗೆ ನಿಯಂತ್ರಣ ಮತ್ತು ನಾವೀನ್ಯತೆಯ ನಡುವಿನ ಸಮತೋಲನವನ್ನು ಖಚಿತಪಡಿಸಿಕೊಳ್ಳಲು ಇದನ್ನು ರೂಪಿಸಲಾಗಿದೆ" ಎಂದು ವೈಷ್ಣವ್ ಅವರು ಪಿಟಿಐಗೆ ತಿಳಿಸಿದ್ದಾರೆ.
ಜಗತ್ತಿಗೆ ಈ ಹಿಂದೆ ಉನ್ನತ ಮಟ್ಟದ ನಿಯಂತ್ರಣದೊಂದಿಗೆ ಯುರೋಪಿಯನ್ ಡೇಟಾ ಸಂರಕ್ಷಣಾ ಕಾಯ್ದೆ ಎಂಬ ಒಂದೇ ಒಂದು ಟೆಂಪ್ಲೇಟ್ ಲಭ್ಯವಿತ್ತು ಎಂದು ಸಚಿವರು ಹೇಳಿದರು.
ಉದ್ಯಮದೊಂದಿಗೆ ವ್ಯಾಪಕವಾದ ಸಮಾಲೋಚನೆಗಳನ್ನು ನಡೆಸಲಾಗಿದೆ. ದೂರು ನೋಂದಣಿ, ಅವುಗಳ ನಿರ್ವಹಣೆ ಮತ್ತು ವಿತರಣೆ, ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳೊಂದಿಗೆ ಸಂವಹನದಂತಹ ವ್ಯವಸ್ಥೆಗಳನ್ನು ಜಾರಿಗೆ ತರಲಾಗಿದೆ ಎಂದು ಐಟಿ ಸಚಿವರು ತಿಳಿಸಿದ್ದಾರೆ.