ಪ್ರಯಾಗರಾಜ: ತ್ರಿವೇಣಿ ಸಂಗಮದಲ್ಲಿ ಆರಂಭಗೊಂಡಿರುವ ವಿಶ್ವದ ಅತಿದೊಡ್ಡ ಉತ್ಸವ ಮಹಾ ಕುಂಭಮೇಳವನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು 'ಏಕತೆಯ ಮಹಾ ಕುಂಭ' ಎಂದು ಬಣ್ಣಿಸಿದ್ದು, ಇದೀಗ 'Ekta_Ka_Mahakumbh' ಹ್ಯಾಶ್‌ಟ್ಯಾಗ್ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೆಂಡ್ ಆಗಿದೆ.
ಬೆಳಿಗ್ಗೆಯಿಂದಲೇ ಮಹಾ ಕುಂಭಮೇಳಕ್ಕೆ ಸಂಬಂಧಿಸಿದ ವಿಡಿಯೊ, ಫೋಟೊ ಮತ್ತು ಮಾಹಿತಿಗಳನ್ನು ಎಕ್ಸ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲು ಪ್ರಾರಂಭಿಸಿರುವ ಬಳಕೆದಾರರು, ತಮ್ಮ ಪೋಸ್ಟ್ ಜೊತೆಗೆ 'Ekta_Ka_Mahakumbh' ಹ್ಯಾಶ್‌ಟ್ಯಾಗ್ ಅನ್ನು ವ್ಯಾಪಕವಾಗಿ ಬಳಸಿದ್ದಾರೆ. ಮಧ್ಯಾಹ್ನದ ವೇಳೆಗೆ ಟ್ರೆಂಡಿಂಗ್ ಚಾರ್ಟ್‌ನಲ್ಲಿ ಈ ಹ್ಯಾಶ್‌ಟ್ಯಾಗ್ ಅಗ್ರಸ್ಥಾನ ಪಡೆದುಕೊಂಡಿತ್ತು.
ಮಾಹಿತಿಯ ಪ್ರಕಾರ, ಮಧ್ಯಾಹ್ನ 3.30 ವೇಳೆಗೆ ಸುಮಾರು 70 ಸಾವಿರ ಬಳಕೆದಾರರು ಈ ಹ್ಯಾಶ್‌ಟ್ಯಾಗ್ ಅನ್ನು ಬಳಸಿಕೊಂಡು ಕುಂಭಮೇಳದಲ್ಲಿನ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಮಹಾಕುಂಭಮೇಳಕ್ಕೆ ಸಂಬಂಧಿಸಿದಂತೆ ಹಲವು ಹ್ಯಾಶ್‌ಟ್ಯಾಗ್‌ಗಳನ್ನು ಬಳಸಿದ್ದರೂ 'Ekta_Ka_Mahakumbh' ಹೆಚ್ಚು ಟ್ರೆಂಡ್ ಆಗಿದೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಈ ಹ್ಯಾಶ್‌ಟ್ಯಾಗ್ ಬಳಸಿದ್ದು, ಅತಿ ಹೆಚ್ಚು ಜನರ ಗಮನ ಸೆಳೆದಿದೆ. ಇದರಿಂದ ಹ್ಯಾಶ್‌ಟ್ಯಾಗ್ ಬಳಸುವವರ ಪ್ರಮಾಣವೂ ಹೆಚ್ಚಿದೆ. ಆದಿತ್ಯನಾಥ್ ಜೊತೆಗೆ ಮಾಜಿ ಕೇಂದ್ರ ಸಚಿವೆ ಸ್ಮೃತಿ ಇರಾನಿ, ಸಚಿವ ಸಂದೀಪ್ ಸಿಂಗ್ ಸೇರಿದಂತೆ ಹಲವು ನಾಯಕರು ಹ್ಯಾಶ್‌ಟ್ಯಾಗ್ ಬಳಸಿ ಪೋಸ್ಟ್ ಮಾಡಿದ್ದಾರೆ.
ಇನ್ನು, Ekta_Ka_Mahakumbh ಹ್ಯಾಶ್‌ಟ್ಯಾಗ್ ಜೊತೆಗೆ MahaKumbh2025, PaushPurnima, PavitraSangam, PrathamAmrit ಮತ್ತು Sangam ಹ್ಯಾಶ್‌ಟ್ಯಾಗ್‌ಗಳನ್ನು ಬಳಸಲಾಗಿದೆ.