ನವದೆಹಲಿ: "ಉಚಿತ"(freebie) ಎಂದರೇನು ಎಂಬುದನ್ನು ವ್ಯಾಖ್ಯಾನಿಸುವುದು ತುಂಬಾ ಕಷ್ಟಕರವಾಗಿದೆ ಮತ್ತು ಈ ವಿಚಾರದಲ್ಲಿ ಚುನಾವಣಾ ಆಯೋಗದ "ಕೈ ಕಟ್ಟಲಾಗಿದೆ". ಏಕೆಂದರೆ ವಿಷಯ ನ್ಯಾಯಾಲಯದಲ್ಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು ಮಂಗಳವಾರ ಹೇಳಿದ್ದಾರೆ.
ಇಂದು ದೆಹಲಿಯಲ್ಲಿ ವಿಧಾನಸಭಾ ಚುನಾವಣೆಯ ವೇಳಾಪಟ್ಟಿಯನ್ನು ಪ್ರಕಟಿಸಲು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯ ಚುನಾವಣಾ ಆಯುಕ್ತ(ಸಿಇಸಿ) ಕುಮಾರ್ ಅವರು, 'ಫ್ರೀ ಬೀಸ್'ಗೆ "ಅನುಮೋದಿತ ಮತ್ತು ಕಾನೂನಿನ ಮೂಲಕ ಉತ್ತರ ಕಂಡುಕೊಳ್ಳಲು ಇದು "ಸೂಕ್ತ ಸಮಯ" ಎಂದರು.
ಚುನಾವಣಾ ಪ್ರಚಾರದ ಸಮಯದಲ್ಲಿ ರಾಜಕೀಯ ಪಕ್ಷಗಳು ಉಚಿತ ಕೊಡುಗೆಗಳನ್ನು ಘೋಷಿಸುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಈ ವಿಷಯವು ನ್ಯಾಯಾಲಯದಲ್ಲಿದೆ. " ಉಚಿತ ಎಂದರೆ ಏನು? ನನಗೆ ಬಿಟ್ಟಿ ಕೊಡುವುದು ಬೇರೆಯವರಿಗೆ ಅದು ಅರ್ಹತೆಯಾಗಿರಬಹುದು. ಉಚಿತ ಏನೆಂದು ವ್ಯಾಖ್ಯಾನಿಸುವುದು ತುಂಬಾ ಕಷ್ಟ" ಎಂದು ಹೇಳಿದರು.
ಉಚಿತ ಘೋಷಣೆಗಳನ್ನು ಮಾಡುವಾಗ, ಜನರು ರಾಜ್ಯದ ಹಣಕಾಸಿನ ಸ್ಥಿತಿಯ ಬಗ್ಗೆಯೂ ತಿಳಿದಿರಬೇಕು ಎಂದು ರಾಜೀವ್ ಕುಮಾರ್ ತಿಳಿಸಿದರು.
"ರಾಜ್ಯದ ಹಣಕಾಸಿನ ಸ್ಥಿತಿ ಏನೆಂಬುದನ್ನು ನೋಡುವುದು ಅವಶ್ಯಕ. ಸಾಲ-ಜಿಡಿಪಿ ಅನುಪಾತ ಏನು? ಆ ಭರವಸೆಯ ಮೇಲೆ ನೀವು ಎಷ್ಟು ಸಾಲ ಪಡೆಯುತ್ತೀರಿ? ಈ ಭರವಸೆಯ ಆರ್ಥಿಕ ವೆಚ್ಚ ಎಷ್ಟು?" ಎಂಬುದನ್ನು ಅವರು ಅರಿತಿರಬೇಕು ಎಂದರು.
"ನಾವು ಮುಂದಿನ ಪೀಳಿಗೆಯ ಭವಿಷ್ಯವನ್ನು ಅಡಮಾನ ಇಡಲು ಸಾಧ್ಯವಿಲ್ಲ, ಇದು ತುಂಬಾ ಗಂಭೀರವಾದ ವಿಷಯವಾಗಿದೆ" ಎಂದು ಅವರು ಹೇಳಿದರು.