ನವದೆಹಲಿ: ಭಾರತದ ಆರ್ಥಿಕ ಬೆಳವಣಿಗೆ ದರವು 2024-25ರಲ್ಲಿ ಭಾರಿ ಕುಸಿಯುವ ಸಾಧ್ಯತ್ತೆ ಇದ್ದು, ನಾಲ್ಕು ವರ್ಷಗಳ ಕನಿಷ್ಠ ಮಟ್ಟವಾದ ಶೇ. 6.4 ಕ್ಕೆ ಕುಸಿಯುತ್ತದೆ ಎಂದು ಅಂದಾಜಿಸಲಾಗಿದೆ.
ಮುಖ್ಯವಾಗಿ ಉತ್ಪಾದನೆ ಮತ್ತು ಸೇವಾ ವಲಯದ ಕಳಪೆ ಪ್ರದರ್ಶನ ಈ ಕುಸಿತಕ್ಕೆ ಕಾರಣ ಎಂದು ಮಂಗಳವಾರ ಬಿಡುಗಡೆಯಾದ ಸರ್ಕಾರಿ ಅಂಕಿಅಂಶಗಳು ತಿಳಿಸಿವೆ.
ಪ್ರಸ್ತಕ ಆರ್ಥಿಕ ವರ್ಷದಲ್ಲಿ ಒಟ್ಟು ದೇಶೀಯ ಉತ್ಪನ್ನ(ಜಿಡಿಪಿ) ಬೆಳವಣಿಗೆಯು ಶೇ. 6.4ಕ್ಕೆ ಕುಸಿಯುವ ಸಾಧ್ಯತೆ ಇದ. ಇದು ಕೋವಿಡ್ ವರ್ಷ(2020-21)ದಲ್ಲಿ ದಾಖಲಾದ ಶೇಕಡಾ 5.8 ರಷ್ಟು ಋಣಾತ್ಮಕ ಬೆಳವಣಿಗೆಗಿಂತ ಕಡಿಮೆಯಾಗಿದೆ.
ಜಿಡಿಪಿ ಬೆಳವಣಿಗೆಯು 2021-22ರಲ್ಲಿ ಶೇ. 9.7 ರಷ್ಟು, 2022-23 ರಲ್ಲಿ ಶೇ. 7 ರಷ್ಟು ಮತ್ತು ಮಾರ್ಚ್ 2024 ರಲ್ಲಿ ಕೊನೆಗೊಂಡ ಕೊನೆಯ ಹಣಕಾಸು ವರ್ಷದಲ್ಲಿ ಶೇ. 8.2 ರಷ್ಟು ದಾಖಲಾಗಿದೆ.
ರಾಷ್ಟ್ರೀಯ ಅಂಕಿಅಂಶ ಕಚೇರಿ(NSO)ಪ್ರಕಾರ, ಭಾರತೀಯ ರಿಸರ್ವ್ ಬ್ಯಾಂಕ್(ಆರ್ ಬಿಐ) ಪ್ರಸ್ತಕ ಆರ್ಥಿಕ ವರ್ಷದ ಜಿಡಿಪಿಯನ್ನು ಶೇ. 7.2 ರಿಂದ ಶೇ. 6.6ಕ್ಕೆ ತಗ್ಗಿಸಿದೆ.
ಪ್ರಸಕ್ತ ಆರ್ಥಿಕ ವರ್ಷದ ಮೊದಲಾರ್ಧದಲ್ಲಿ ಜಿಡಿಪಿ ಬೆಳವಣಿಗೆಯು ನಿರೀಕ್ಷೆ ಮಾಡಿದ್ದಕ್ಕಿಂತಲೂ ಕಡಿಮೆ ದಾಖಲಾಗಿದೆ. ಲೋಕಸಭೆ ಚುನಾವಣೆ ಫಲಿತಾಂಶದ ಅನಿಶ್ಚಿತತೆ, ನಿರೀಕ್ಷೆಗೂ ಮೀರಿ ಸುರಿದ ಮಳೆ ಹಾಗೂ ಜಾಗತಿಕ ಬಿಕ್ಕಟ್ಟು ಇದಕ್ಕೆ ಕಾರಣವಾಗಿದೆ. ಇದು ದೇಶಿಯ ಬೇಡಿಕೆ ಮತ್ತು ರಫ್ತು ಚಟುವಟಿಕೆ ಮೇಲೂ ಪರಿಣಾಮ ಬೀರಿದೆ ಎಂದು ಡೆಲಾಯ್ಟ್ ಇಂಡಿಯಾದ ಅರ್ಥಶಾಸ್ತ್ರಜ್ಞೆ ರುಮ್ಕಿ ಮಜುಂದಾರ್ ಅವರು ಇತ್ತೀಚಿಗೆ ಹೇಳಿದ್ದರು.