ಗುವಾಹಟಿ: ಗೂಗಲ್ ಮ್ಯಾಪ್ಸ್ ತೋರಿದ ಮಾರ್ಗ ಅನುಸರಿಸಿ ಹೋದ ಅಸ್ಸಾಂ ಪೊಲೀಸರು ಫಜೀತಿಪಟ್ಟ ಪ್ರಸಂಗ ಇತ್ತೀಚೆಗೆ ನಡೆದಿದೆ.
ಕಳೆದ ಮಂಗಳವಾರ ಮೋಸ್ಟ್ ವಾಂಟೆಂಡ್ ಆರೋಪಿಯೊಬ್ಬನನ್ನು ಹಿಡಿಯಲು ಅಸ್ಸಾಂನ ಜೋರ್ಹತ್ ಜಿಲ್ಲಾ ಪೊಲೀಸರ 16 ಸದಸ್ಯರ ತಂಡ ಹೊರಟಿತ್ತು. ಈ ತಂಡ ತಾವು ಹೋಗಬೇಕಿದ್ದ ಅಸ್ಸಾಂನ ಸ್ಥಳವನ್ನು ಗೂಗಲ್ ಮ್ಯಾಪ್ಸ್ ಬಳಸಿ ಹೊರಟಿತ್ತು.
ಕೊನೆಗೆ ಚಹ ಎಸ್ಟೇಟ್ ಒಂದಕ್ಕೆ ಪೊಲೀಸರ ವ್ಯಾನ್ ಹೋಗಿ ನಿಂತಿದೆ. ಆದರೆ, ಅದು ವಾಸ್ತವಿಕವಾಗಿ ನಾಗಾಲ್ಯಾಂಡ್‌ಗೆ ಸೇರಿದ ಪ್ರದೇಶವಾಗಿತ್ತು. ಸುದ್ದಿ ತಿಳಿದು ಪೊಲೀಸರ ಬಳಿ ಬಂದ ಸ್ಥಳೀಯರು, ಅವರನ್ನು ಅಪರಾಧಿಗಳು ಎಂದು ತಿಳಿದು ಅಸ್ಸಾಂ ಪೊಲೀಸರನ್ನೇ ಬಂಧಿಸಿ ಮಂಗಳವಾರ ಇಡೀ ರಾತ್ರಿ ಅವರಿಗೆ ತೊಂದರೆ ಕೊಟ್ಟಿದ್ದಾರೆ.
ಈ ವೇಳೆ ಒಬ್ಬ ಅಸ್ಸಾಂ ಪೊಲೀಸ್ ಸಿಬ್ಬಂದಿಗೆ ಸ್ಥಳೀಯರು ಹಲ್ಲೆಯನ್ನೂ ಮಾಡಿದ್ದಾರೆ. ಇಬ್ಬರು ಸಿಬ್ಬಂದಿ ಪೊಲೀಸ್ ಸಮವಸ್ತ್ರದಲ್ಲಿ ಇದ್ದು, ಉಳಿದವರು ನಾಗರಿಕ ಸಮವಸ್ತ್ರದಲ್ಲಿದ್ದರು. 'ತಾವು ಅಸ್ಸಾಂ ಪೊಲೀಸ್' ಎಂದು ಪರಿಪರಿಯಾಗಿ ಹೇಳಿದರೂ ಸ್ಥಳೀಯರು ಅಸ್ಸಾಂ ಪೊಲೀಸರಿಗೆ ತೀವ್ರ ತೊಂದರೆ ಕೊಟ್ಟಿದ್ದಾರೆ.
ಪರಿಸ್ಥಿತಿ ಬಿಗಡಾಯಿಸಿದ್ದು ಕಂಡು ಬಂದಿದ್ದರಿಂದ ಜೋರ್ಹತ್ ಎಸ್‌ಪಿ, ನಾಗಾಲ್ಯಾಂಡ್‌ನ ಮೋಕೊಕ್‌ಚುಂಗ್ ಎಸ್‌ಪಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ನಂತರ ನಾಗಾಲ್ಯಾಂಡ್ ಪೊಲೀಸರ ನೆರವಿನೊಂದಿಗೆ ಅಸ್ಸಾಂ ಪೊಲೀಸರು ಬುಧವಾರ ಬೆಳಿಗ್ಗೆ ಮನೆ ಸೇರಿದ್ದಾರೆ.
ಇತ್ತೀಚೆಗೆ ಗೂಗಲ್ ಮ್ಯಾಪ್ಸ್ ನಂಬಿ ಕಾರಿನಲ್ಲಿ ಹೋಗಿದ್ದ ಮೂವರು ಯುವಕರು ಅಪೂರ್ಣ ಸೇತುವೆ ಮೇಲಿಂದ ಬಿದ್ದು ಮೃತಪಟ್ಟಿದ್ದ ಘಟನೆ ಉತ್ತರಪ್ರದೇಶದಲ್ಲಿ ನಡೆದಿತ್ತು.