ನವದೆಹಲಿ:ದೇಶದ ಜನತೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿದಂತೆ ಗಣ್ಯರು ಹೊಸ ವರ್ಷದ ಶುಭಾಶಯಗಳನ್ನು ಕೋರಿದ್ದಾರೆ.
'ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು! 2025ನೇ ವರ್ಷ ಎಲ್ಲರಿಗೂ ಸಂತೋಷ, ಸಾಮರಸ್ಯ ಮತ್ತು ಸಮೃದ್ಧಿಯನ್ನು ತರಲಿ' ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಶುಭ ಹಾರೈಸಿದ್ದಾರೆ.
ಈ ಸಂದರ್ಭದಲ್ಲಿ ಉಜ್ವಲ ಭಾರತ ಮತ್ತು ಸುಸ್ಥಿರ ಭವಿಷ್ಯವನ್ನು ನಿರ್ಮಿಸಲು ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡೋಣ ಎಂದು ರಾಷ್ಟ್ರಪತಿ ಕರೆ ನೀಡಿದ್ದಾರೆ.
'ಹೊಸ ವರ್ಷವು ನೂತನ ಅವಕಾಶ, ಯಶಸ್ಸು ಮತ್ತು ಹರ್ಷವನ್ನು ತರಲಿ. ಎಲ್ಲರೂ ಆರೋಗ್ಯವಾಗಿರಲಿ ಮತ್ತು ಸಮೃದ್ಧಿಯ ಬದುಕು ನಿಮ್ಮದಾಗಲಿ' ಎಂದು ಪ್ರಧಾನಿ ನರೇಂದ್ರ ಮೋದಿ ಶುಭಾಶಯ ತಿಳಿಸಿದ್ದಾರೆ.
ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೊಸ ವರ್ಷದ ಶುಭಾಶಯಗಳನ್ನು ಕೋರಿದ್ದಾರೆ. 'ಹೊಸ ವರ್ಷವು ಜೀವನದಲ್ಲಿ ನವೋಲ್ಲಾಸ, ಉತ್ಸಾಹ ಮತ್ತು ಸಂತೋಷವನ್ನು ತರಲಿ' ಎಂದು ಶುಭ ಹಾರೈಸಿದ್ದಾರೆ.
'ಸಮಗ್ರ ಪ್ರಗತಿ, ವಿವಿಧತೆಯಲ್ಲಿ ಏಕತೆ, ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಸಂವಿಧಾನ ರಕ್ಷಣೆಗಾಗಿ ಸಂಕಲ್ಪದೊಂದಿಗೆ ಬದ್ಧತೆಯನ್ನು ಪುನರುಚ್ಚರಿಸೋಣ' ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜನ ಖರ್ಗೆ ಹೊಸ ವರ್ಷದ ಸಂದೇಶದಲ್ಲಿ ಕರೆ ನೀಡಿದ್ದಾರೆ.