ನವದೆಹಲಿ: ಎಚ್‌ಐವಿ ಸೋಂಕಿತ ಲಿಂಗತ್ವ ಅಲ್ಪಸಂಖ್ಯಾತ ಮಹಿಳೆಯಿಂದ ಯಾವುದೇ ಗುರುತಿನ ಪುರಾವೆ ಪಡೆಯದೇ ಚಿಕಿತ್ಸೆ ನೀಡುವಂತೆ ದೆಹಲಿಯ ಲೋಕ ನಾಯಕ್ ಆಸ್ಪತ್ರೆಗೆ ದೆಹಲಿ ಹೈಕೋರ್ಟ್ ನಿರ್ದೇಶಿಸಿದೆ.
ಈ ಮಹಿಳೆಗೆ ಪುನರ್ವಸತಿ ಕಲ್ಪಿಸುವ ಕುರಿತು ಸಲ್ಲಿಕೆಯಾದ ಅರ್ಜಿಗೆ ಸಂಬಂಧಿಸಿದಂತೆ ಕೇಂದ್ರ ಹಾಗೂ ದೆಹಲಿ ಸರ್ಕಾರಕ್ಕೆ ನ್ಯಾ.ಸಂಜೀವ್ ನರುಲಾ ಅವರಿದ್ದ ಪೀಠವು ನೋಟಿಸ್ ಜಾರಿ ಮಾಡಿದೆ.
'ಅರ್ಜಿದಾರರ ಆರೋಗ್ಯವನ್ನು ಪರೀಕ್ಷಿಸಿ, ಅವರಿಗೆ ಚಿಕಿತ್ಸೆಯ ಅಗತ್ಯವಿದೆಯೇ ಎಂಬುದನ್ನು ಪರಿಶೀಲಿಸಬೇಕು. ಒಂದೊಮ್ಮೆ ಚಿಕಿತ್ಸೆ ಬೇಕಾಗಿದ್ದಲ್ಲಿ, ಯಾವುದೇ ಗುರುತು ಪುರಾವೆಯ ನೆಪವೊಡ್ಡಿ ತಿರಸ್ಕರಿಸಬಾರದು' ಎಂದು ಲೋಕ ನಾಯಕ್ ಆಸ್ಪತ್ರೆಗೆ ಹೈಕೋರ್ಟ್ ನಿರ್ದೇಶಿಸಿದೆ.
'ದೆಹಲಿಯ ಚಳಿ ಹಾಗೂ ಮಹಿಳೆಯ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ವಸತಿ ಸೌಕರ್ಯವನ್ನು ಕಲ್ಪಿಸುವುದರ ಜತೆಗೆ, ಕೌಶಲಾಭಿವೃದ್ಧಿ ಮೂಲಕ ಅವರ ಪುನರ್ವಸತಿಗೂ ವ್ಯವಸ್ಥೆ ಮಾಡಬೇಕು' ಎಂದು ಕೇಂದ್ರಕ್ಕೆ ಹೈಕೋರ್ಟ್ ಹೇಳಿದೆ.
'ಅಪ್ರಾಪ್ತೆಯಾಗಿದ್ದಾಗ ವ್ಯಕ್ತಿಯೊಬ್ಬ ತನ್ನನ್ನು ಅಪಹರಿಸಿ, ಲೈಂಗಿಕವಾಗಿ ಶೋಷಿಸಿದ. ಲೋಕ ನಾಯಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ದಾಖಲಾಗುವಂತೆ ಸಲಹೆ ನೀಡಿದ್ದಾರೆ. ತನಗೊಂದು ಸೂರು ಕಲ್ಪಿಸುವಂತೆ ಹಲವು ಸ್ವಯಂ ಸೇವಾ ಸಂಸ್ಥೆಯನ್ನು ಸಂಪರ್ಕಿಸಿದ್ದೆ. ಆದರೆ ಗುರುತಿನ ಪುರಾವೆ ಇಲ್ಲದ ಕಾರಣ ಅವರೆಲ್ಲರೂ ತಿರಸ್ಕರಿಸಿದರು' ಎಂದು ಮಹಿಳೆ ಹೇಳಿದ್ದಾರೆ.
ಈ ಪ್ರಕರಣದ ಮುಂದಿನ ವಿಚಾರಣೆ ಜ. 9ರಂದು ನಡೆಯಲಿದೆ.