ಬೆಂಗಳೂರು: 8 ತಿಂಗಳ ಮಗುವಿಗೆ ಎಚ್‌ಎಂಪಿವಿ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದ್ದು ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಇಲಾಖೆ ಹೇಳಿದೆ.
ಚೀನಾದಲ್ಲಿ ಪತ್ತೆಯಾಗಿರುವ ಮ್ಯುಟೇಟೆಡ್ ವೈರಸ್‌ನೊಂದಿಗೆ ಇದಕ್ಕೆ ಸಂಬಂಧ ಇದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಹಾಗಾಗಿ ಚಿಂತೆಪಡಬೇಕಾಗಿಲ್ಲ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಗುವಿನಲ್ಲಿ ಪತ್ತೆಯಾಗಿದೆ. ಮಗುವಿಗೆ ಜ್ವರ ಬಂದ ಹಿನ್ನೆಲೆಯಲ್ಲಿ ನಗರದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಈ ವೇಳೆ ರಕ್ತ ಪರೀಕ್ಷೆ ಮಾಡಿಸಿದಾಗ ಎಚ್‌ಎಂವಿಪಿ ವೈರಸ್ ಇರುವುದು ದೃಢಪಟ್ಟಿದೆ.
ಸದ್ಯಕ್ಕೆ ಒಂದು ಪ್ರಕರಣ ಪತ್ತೆಯಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಉಳಿದ ಕಡೆ ಎಲ್ಲೆಲ್ಲಿ ಈ ರೀತಿಯ ಸೋಂಕು ಪತ್ತೆಯಾಗಿದೆ ಎಂಬುದರ ಮಾಹಿತಿ ಕಲೆ ಹಾಕಲು ಆರೋಗ್ಯ ಇಲಾಖೆ ಮುಂದಾಗಿದೆ. ಚೀನಾದಲ್ಲಿ ಕಂಡು ಬಂದಿರುವ ಹೆಚ್‌ಎಂಪಿವಿ ಹರಡುವ ಬಗ್ಗೆ ಭಯಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಸೇವೆಗಳ ಮಹಾನಿರ್ದೇಶನಾಲಯದ ಅಧಿಕಾರಿ ಡಾ ಅತುಲ್ ಗೋಯೆಲ್ ಕಳೆದ ವಾರ ತಿಳಿಸಿದ್ದರು.
HMPV ವೈರಸ್ ಗೆ ಯಾವುದೇ ನಿರ್ದಿಷ್ಟ ಆಂಟಿವೈರಲ್ ಚಿಕಿತ್ಸೆ ಇಲ್ಲ. ಆದ್ದರಿಂದ ಅದರ ಹರಡುವಿಕೆಯನ್ನು ನಿಯಂತ್ರಿಸಲು ಸೂಕ್ತ ಮುಂಜಾಗ್ರತೆ ಮುಖ್ಯವಾಗಿದೆ. ಚೀನಾದಲ್ಲಿ ಹೆಚ್‌ಎಂಪಿವಿ ಏಕಾಏಕಿ ಹರಡಿರುವ ಬಗ್ಗೆ ಸುದ್ದಿಗಳಿವೆ. ಇದು ಯಾವುದೇ ಇತರ ಉಸಿರಾಟದ ವೈರಸ್‌ನಂತೆ ಸಾಮಾನ್ಯ ಶೀತವನ್ನು ಉಂಟುಮಾಡುತ್ತದೆ ಮತ್ತು ವಯಸ್ಸಾದವರಲ್ಲಿ ಮತ್ತು ಚಿಕ್ಕವರಲ್ಲಿ ಇದು ಜ್ವರಕ್ಕೆ ಕಾರಣವಾಗಬಹುದು ಎಂದು ವಿವರಿಸಿದ್ದರು.
ಪ್ರಸ್ತುತ ಚೀನಾದಲ್ಲಿ ಆತಂಕಕ್ಕೆ ಕಾರಣವಾಗಿದೆ ಎನ್ನಲಾಗಿರುವ ಹ್ಯೂಮನ್ ಮೆಟಾಪ್ನ್ಯೂಮೋ ವೈರಸ್ ಅಥವಾ ಎಚ್‌ಎಂಪಿವಿ ಹೊಸದೇನಲ್ಲ. ಇದನ್ನು ಮೊದಲು 2001 ರಲ್ಲಿ ಕಂಡುಹಿಡಿಯಲಾಯಿತು ಎಂದು ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ಹೇಳಿದೆ. ಆದಾಗ್ಯೂ, ಕೆಲವು ಸೆರೋಲಾಜಿಕ್ ಪುರಾವೆಗಳು ವೈರಸ್ 1958 ರಿಂದಲೇ ವ್ಯಾಪಕವಾಗಿ ಹರಡಿತ್ತು ಎಂಬುದನ್ನು ನಿರೂಪಿಸಿರುವುದಾಗಿ ತಜ್ಞರು ಹೇಳಿದ್ದಾರೆ.
ಮಗುವಿನಲ್ಲಿ ವೈರಸ್ ಪತ್ತೆಯಾದ ಬಗ್ಗೆ ಕೇಂದ್ರ ಆರೋಗ್ಯ ಇಲಾಖೆಗೆ ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಕೇಂದ್ರ ಆರೋಗ್ಯ ಇಲಾಖೆ ಅಧಿಕಾರಿಗಳ ಜತೆ ನಿರಂತರ ಸಂಪರ್ಕದಲ್ಲಿದ್ದೇವೆ ಎಂದೂಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಸೂಕ್ತ ಮುನ್ನೆಚ್ಚರಿಕೆ ವಹಿಸಿ ಎಂದು ಕೇಂದ್ರ ಆರೋಗ್ಯ ಇಲಾಖೆ ರಾಜ್ಯಕ್ಕೆ ಸೂಚಿಸಿದೆ.