ನವದೆಹಲಿ: ಬಾಂಗ್ಲಾದೇಶದ ಹಿರಿಯ ರಾಯಭಾರಿ, ಹಂಗಾಮಿ ಹೈಕಮಿಷನರ್ ನೂರುಲ್ ಇಸ್ಲಾಂ ಅವರನ್ನು ಸೋಮವಾರ ಕರೆಸಿದ ಭಾರತವು, ಉಭಯ ದೇಶಗಳ ನಡುವಿನ ಗಡಿಯಲ್ಲಿನ ಬೇಲಿ ನಿರ್ಮಿಸುವ ಕಾರ್ಯದಲ್ಲಿ ಎಲ್ಲ ನಿಯಮಗಳನ್ನು ಪಾಲಿಸಲಾಗುತ್ತಿದೆ ಎಂದು ತಿಳಿಸಿದೆ.
ಗಡಿ ಭದ್ರತಾ ಪಡೆಯ ಚಟುವಟಿಕೆಗಳ ಬಗ್ಗೆ ಬಾಂಗ್ಲಾದೇಶದ ವಿದೇಶಾಂಗ ಸಚಿವಾಲಯವು ಭಾನುವಾರ ಭಾರತದ ರಾಯಭಾರಿ ಪ್ರಣಯ್ ವರ್ಮಾ ಅವರನ್ನು ಕಚೇರಿಗೆ ಕರೆಸಿ ಕಳವಳ ವ್ಯಕ್ತಪಡಿಸಿತ್ತು. ಇದಾದ ಒಂದು ದಿನದ ಬಳಿಕ ಭಾರತವು ಬಾಂಗ್ಲಾದ ಹೈಕಮಿಷನರ್‌ಗೆ ಸಮನ್ಸ್ ಜಾರಿ ಮಾಡಿ ಕರೆಸಿಕೊಂಡಿತ್ತು.
ಗಡಿ ಭದ್ರತಾ ವಿಷಯದಲ್ಲಿ ಎರಡೂ ದೇಶಗಳ ಸರ್ಕಾರಗಳ ನಡವಿನ ಒಪ್ಪಂದಗಳು ಮತ್ತು ನಿಯಮಗಳನ್ನು ಭಾರತ ಗಮನಿಸಿದೆ ಎಂಬ ವಿಚಾರವನ್ನು ನೂರುಲ್ ಇಸ್ಲಾಂ ಅವರಿಗೆ ಮನವರಿಕೆ ಮಾಡಲಾಯಿತು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ಅಂತೆಯೇ ಗಡಿಯಾಚೆಗಿನ ಅಪರಾಧಗಳ ನಿಯಂತ್ರಣ ಸೇರಿದಂತೆ ಹಿಂದಿನ ಎಲ್ಲ ಒಪ್ಪಂದಗಳನ್ನು ಬಾಂಗ್ಲಾದೇಶ ಸರ್ಕಾರವು ಸಹಕಾರಿ ವಿಧಾನದೊಂದಿಗೆ ಜಾರಿಗೆ ತರುತ್ತದೆ ಎಂಬ ನಿರೀಕ್ಷೆಯಿದೆ ಎಂಬುದನ್ನೂ ಹೈಕಮಿಷನರ್‌ಗೆ ತಿಳಿಸಿರುವುದಾಗಿ ಸಚಿವಾಲಯದ ಪ್ರಕಟಣೆ ಹೇಳಿದೆ.
'ಗಡಿಯಾಚೆಗಿನ ಅಪರಾಧ ಚಟುವಟಿಕೆಗಳು, ಕಳ್ಳಸಾಗಣೆ, ಅಪರಾಧಿಗಳ ಚಲನವಲನ ಮತ್ತು ಕಳ್ಳಸಾಗಣೆಯ ಸವಾಲುಗಳನ್ನು ಪರಿಣಾಮಕಾರಿಯಾಗಿ ಎದುರಿಸುವ ಮೂಲಕ ಅಪರಾಧ ಮುಕ್ತ ಗಡಿಯನ್ನು ಖಚಿತಪಡಿಸಿಕೊಳ್ಳಲು ಭಾರತ ತನ್ನ ಬದ್ಧತೆಯನ್ನು ಪುನರುಚ್ಚರಿಸಿದೆ' ಎಂದು ಪ್ರಕಟಣೆ ತಿಳಿಸಿದೆ.
ಮುಳ್ಳುತಂತಿ ಬೇಲಿ, ಗಡಿ ದೀಪ, ತಾಂತ್ರಿಕ ಸಾಧನಗಳ ಅಳವಡಿಕೆ ಮತ್ತು ಜಾನುವಾರು ಬೇಲಿಗಳು ಗಡಿಯನ್ನು ಭದ್ರಪಡಿಸುವ ಕ್ರಮಗಳ ಭಾಗವಾಗಿವೆ ಎಂದು ಎಂಇಎ ಹೇಳಿದೆ.