ಅಹಮದಾಬಾದ್: ನಾಲ್ಕು ದಿನಗಳ ಅಂತರರಾಷ್ಟ್ರೀಯ ಗಾಳಿಪಟ ಉತ್ಸವವನ್ನು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ಶನಿವಾರ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, 'ದೇಶದ ಗಾಳಿಪಟ ಮಾರುಕಟ್ಟೆಯಲ್ಲಿ ಗುಜರಾತ್ ಶೇ.65ರಷ್ಟು ಪಾಲನ್ನು ಹೊಂದಿದೆ.
ಅಮೆರಿಕ, ಯುರೋಪ್ ಮತ್ತು ಕೆನಡಾದಂತಹ ದೇಶಗಳಿಗೆ ರಫ್ತು ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಈ ವರ್ಷ 11 ದೇಶಗಳ ರಾಯಭಾರಿಗಳು ಗಾಳಿಪಟ ಉತ್ಸವವನ್ನು ವೀಕ್ಷಿಸಲು ಗುಜರಾತ್‌ಗೆ ಪ್ರಯಾಣಿಸಿದ್ದಾರೆ. ಕಳೆದ ವರ್ಷ ಐದೂವರೆ ಲಕ್ಷಕ್ಕೂ ಹೆಚ್ಚು ಜನರು ಅಂತರರಾಷ್ಟ್ರೀಯ ಗಾಳಿಪಟ ಉತ್ಸವದಲ್ಲಿ ಪಾಲ್ಗೊಂಡಿದ್ದರು. ಗುಜರಾತಿಗರು ಗಾಳಿಪಟವನ್ನು ಇಷ್ಟಪಡುವ ಕಾರಣದಿಂದ ಅತಿ ಹೆಚ್ಚು ಗಾಳಿಪಟಗಳನ್ನು ತಯಾರಿಸುವ ರಾಜ್ಯವಾಗಿ ಗುಜರಾತ್ ವಿಶ್ವದಲ್ಲಿ ಮನ್ನಣೆ ಗಳಿಸಿದೆ ಎಂದು ಮುಖ್ಯಮಂತ್ರಿ ಪಟೇಲ್ ತಿಳಿಸಿದ್ದಾರೆ.
ಜನವರಿ 11ರಿಂದ 14ರವರೆಗೆ ಅಹಮದಾಬಾದ್‌ನ ಸಾಬರಮತಿ ನದಿಯ ಮುಂಭಾಗ 'ಅಂತರರಾಷ್ಟ್ರೀಯ ಗಾಳಿಪಟ ಉತ್ಸವ-2025' ಅನ್ನು ಆಯೋಜಿಸಲಾಗಿದೆ.
ರಾಜ್ಯ ಪ್ರವಾಸೋದ್ಯಮ ಸಚಿವ ಮುಳು ಬೇರ ಮಾತನಾಡಿ, ಈ ವರ್ಷ 47 ದೇಶಗಳಿಂದ 143 ಅಂತರರಾಷ್ಟ್ರೀಯ ಗಾಳಿಪಟ ಹಾರಾಟಗಾರರು ಮತ್ತು ದೇಶದ 11 ರಾಜ್ಯಗಳಿಂದ 52 ಗಾಳಿಪಟ ಹಾರಾಟಗಾರರು ಉತ್ಸವದಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.