ಡೇರ್ ಅಲ್ ಬಲಾಹ್: ದುಗುಡ, ಆತಂಕ, ಮುಂದೇನು ಎಂಬ ಪ್ರಶ್ನೆಗಳೇ ಕಾಡುತ್ತಿದ್ದ ಗಾಜಾಪಟ್ಟಿಯ ಅಸಂಖ್ಯ ನಿವಾಸಿಗಳ ಮೊಗದಲ್ಲೀಗ ಸಮಾಧಾನದ ನಗು, ನೆಮ್ಮದಿಯ ನಿಟ್ಟುಸಿರು. ಗಾಜಾಪಟ್ಟಿಯ ಮೇಲೆ ಸತತ 15 ತಿಂಗಳು ಬಿದ್ದ ಪೆಟ್ಟುಗಳು ಈ ನಗರಗಳ ಚಹರೆ ಬದಲಿಸಿವೆ.
ಯುದ್ಧದ ಸದ್ದು ಶುರುವಾದ ನಂತರ 15 ತಿಂಗಳ ಹಿಂದೆ ಮನೆಗಳನ್ನೇ ಬಿಟ್ಟು ಸುರಕ್ಷಿತ ತಾಣಗಳತ್ತ ವಲಸೆ ಹೋಗಿದ್ದ ಅಷ್ಟೂ ಜನರು ಭಾನುವಾರ ಮರಳಿ ಮನೆಗಳತ್ತ ಹೆಜ್ಜೆ ಹಾಕಿದರು. ಅವರದೀಗ ಅವಶೇಷಗಳಡಿ ಅಳಿದುಳಿದ ಬದುಕು ಹುಡುಕುವ ಕಾಯಕ ಮತ್ತು ಮತ್ತೆ ಬದುಕು ಕಟ್ಟಿಕೊಳ್ಳುವ ತವಕ.
ಇಸ್ರೇಲ್ ಸೇನೆ ಮತ್ತು ಹಮಾಸ್ ಬಂಡುಕೋರರ ನಡುವೆ ನಿರಂತರ ಮಾತುಕತೆಯ ನಂತರ ಅಮರಿಕ, ಈಜಿಪ್ಟ್, ಕತಾರ್‌ನ ಮಧ್ಯಸ್ಥಿಕೆಯಲ್ಲಿ ಮೂಡಿದ್ದ ಕದನವಿರಾಮ ಒಪ್ಪಂದದ ಅನುಷ್ಠಾನ ಭಾನುವಾರ ನಿಗದಿತ ಅವಧಿಗಿಂತಲೂ ಮೂರು ಗಂಟೆ ತಡವಾಗಿ ಆರಂಭವಾಯಿತು.
ಸ್ಥಳೀಯ ಕಾಲಮಾನ ಬೆಳಿಗ್ಗೆ 11.15 ಗಂಟೆಗೆ ಕದನವಿರಾಮ ಜಾರಿ ಆರಂಭವಾಯಿತು. ಯುದ್ಧ, ಅದರ ಪರಿಣಾಮಗಳಿಗೆ ಸಾಕ್ಷಿಯಾಗಿದ್ದ ನೆಲದಲ್ಲಿ ಭಾನುವಾರ ಬೆಳಿಗ್ಗೆ ಸಂಭ್ರಮ ಮನೆಮಾಡಿತ್ತು. ಕದನ ವಿರಾಮದ ಮಾಹಿತಿ ಇದ್ದ ನಿವಾಸಿಗಳು ಗಾಜಾಪಟ್ಟಿಯ ವಿವಿಧ ನಗರಗಳತ್ತ ಮರಳಿ ಬರುತ್ತಿದ್ದರು.
ಇಸ್ರೇಲ್ ಮತ್ತು ಹಮಾಸ್ ಬಂಡುಕೋರರ ನಡುವೆ ಸಂಘರ್ಷ ಕೊನೆಗಾಣಿಸುವ ನಿಟ್ಟಿನಲ್ಲಿ ಇದು ಮೊದಲ ಹೆಜ್ಜೆಯಾಗಿದೆ. ಒಪ್ಪಂದದಂತೆ ಹಮಾಸ್ ಬಂಡುಕೋರರು ತಾವು ಬಿಡುಗಡೆ ಮಾಡಬೇಕಿದ್ದ ಮೂವರು ಒತ್ತೆಯಾಳುಗಳ ಹೆಸರು ಪ್ರಕಟಿಸಲು ತಡಮಾಡಿದ್ವು, ವಿಳಂಬಕ್ಕೆ ಕಾರಣವಾಯಿತು.
ಕದನ ವಿರಾಮವು ಒಟ್ಟು 42 ದಿನ ಇರಲಿದೆ. ಒಪ್ಪಂದದಂತೆ, ಹಮಾಸ್ ಬಂಡುಕೋರರು ಹಂತ ಹಂತವಾಗಿ 33 ಒತ್ತೆಯಾಳುಗಳನ್ನು ಹಾಗೂ ಇಸ್ರೇಲ್ ಸೇನೆಯು ಸುಮಾರು 700 ಜನ ಕೈದಿಗಳನ್ನು ಬಿಡುಗಡೆ ಮಾಡಬೇಕು ಎಂಬುದು ಒಪ್ಪಂದದ ಭಾಗಿವಾಗಿದೆ.
ಅಲ್ಲದೆ, ಇಸ್ರೇಲ್ ಸೇನೆ ಗಾಜಾದಲ್ಲಿನ ಬಫರ್ ವಲಯದಿಂದ ಹಿಂದೆ ಸರಿಯಬೇಕು. ನಿರ್ವಸಿತರಾಗಿರುವ ಅನೇಕ ಪ್ಯಾಲೆಸ್ತೀನಿಯರು ಮನೆಗೆ ಮರಳಲು ಅನುವು ಮಾಡಿಕೊಡಬೇಕು ಎಂಬುದೂ ಸೇರಿದೆ.
ಕದನವಿರಾಮ ಅವಧಿಯಲ್ಲಿ ಯುದ್ಧ ಬಾಧಿತ ನಗರಗಳ ನಿವಾಸಿಗಳಿಗೆ ಅಗತ್ಯ ನೆರವು ಮುಖ್ಯವಾಗಿ ಆಹಾರ, ಆರೋಗ್ಯ ಚಿಕಿತ್ಸೆಗೆ ಸಂಬಂಧಿಸಿದ ನೆರವು ಒದಗಿಸಲು ನೆರವಾಗಲಿದೆ ಎಂದು ಆಶಿಸಲಾಗಿದೆ.
ಮಕ್ಕಳು, ಮಹಿಳೆಯರು ಸೇರಿದಂತೆ ನಾಗರಿಕರು ಪ್ಯಾಲೆಸ್ತೀನ್ ಧ್ವಜ ಹಿಡಿದು ಸಂಭ್ರಮಿಸಿದರು. ಸಂಭ್ರದ ನಡುವೆ ಅಲ್ಲಲ್ಲಿ ಮುಸುಕುಧಾರಿ ಬಂಡುಕೋರರು ಕಾಣಿಸಿಕೊಂಡರು. ಪ್ಯಾಲೆಸ್ತೀನ್ ಮತ್ತು ಬಂಡುಕೋರರ ಪರವಾಗಿಯೂ ಘೋಷಣೆಗಳು ಕೇಳಿಬಂದವು.
ಸಾವಿರಾರು ಪ್ಯಾಲೆಸ್ತೀನಿಯರು ಲಾರಿಗಳಲ್ಲಿ, ಕತ್ತೆ ಕಟ್ಟಿದ್ದ ಗಾಡಿಗಳಲ್ಲಿ ವಿವಿಧ ಪರಿಕರಗಳೊಂದಿಗೆ ಸಾಗುತ್ತಿದ್ದುದು ಗಡಿ ಪ್ರದೇಶಗಳಲ್ಲಿ ಸಾಮಾನ್ಯ ದೃಶ್ಯವಾಗಿತ್ತು. ಗಾಜಾ ಪಟ್ಟಿಯ ಉತ್ತರ ಭಾಗದಲ್ಲಿ ಮಕ್ಕಳು, ಮಹಿಳೆಯರು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಜನರು ನಡೆದುಕೊಂಡೇ ತೆರಳುತ್ತಿದ್ದರು.
'ಜನರು ಮನೆಗಳಿಗೆ ಮರಳುತ್ತಿದ್ದಾರೆ. ಆದರೆ, ಗಡಿಯಲ್ಲಿ ಗುಂಡುಗಳ ಮೊರೆತ ತಗ್ಗಿಲ್ಲ. ಅದರ ನಡುವೆಯೂ ಜನರು ಮೂಲ ಮನೆಗಳತ್ತ ಬರುತ್ತಿದ್ದಾರೆ. ಅವರಿಗೆ ಕಾಯುವ ಮನಃಸ್ಥಿತಿಯಿಲ್ಲ. ಈ ಹುಚ್ಚಾಟ ಸಾಕು ಎನಿಸಿದೆ' ಎಂದು ಸ್ಥಳಿಯ ನಿವಾಸಿ ಅಹ್ಮದ್ ಮ್ಯಾಟರ್ ಪ್ರತಿಕ್ರಿಯಿಸಿದರು.
ಇನ್ನೊಂದೆಡೆ, ಕದನ ವಿರಾಮ ನಂತರದ ಬೆಳವಣಿಗೆಗಿಂತಲೂ ಒತ್ತೆಯಾಳುಗಳು ಸುರಕ್ಷಿತವಾಗಿ ವಾಪಸಾಗುವತ್ತ ಇಸ್ರೇಲಿಗರ ಗಮನ ಹೆಚ್ಚು ಕೇಂದ್ರೀಕೃತವಾಗಿದೆ.
ಕದನ ವಿರಾಮ ಒಪ್ಪಂದ ಜಾರಿ ಹಿಂದೆಯೇ ಜಬಾಲಿಯಾದ ಸಫ್ತಾವಿ ವಲಯದಿಂದ ಗಾಜಾ ನಗರ ಪ್ರವೇಶಿಸುತ್ತಿರುವ ನೂರಾರು ಪ್ಯಾಲೆಸ್ತೀನಿಯರು
ಕದನ ವಿರಾಮ ಘೋಷಣೆಯ ಬಳಿಕ ರಫಾ ಗಡಿದಾಟಿ ಈಜಿಪ್ಟ್ ಭೂಗಡಿಯತ್ತ ಸಾಗುತ್ತಿರುರುವ ಇಸ್ರೇಲ್‌ನ ಯುದ್ಧ ಟ್ಯಾಂಕರ್‌ಗಳು
ಕದನ ವಿರಾಮ ಜಾರಿ ನಂತರ...
* ಗಾಜಾಪಟ್ಟಿ: ಇಸ್ರೇಲ್ ನಿಯಂತ್ರಣದ ಕೆರೆಮ್ ಶಾಲೊಂ ಕ್ರಾಸಿಂಗ್‌ನಿಂದ ಇಂಧನ ಅಗತ್ಯ ವಸ್ತುಗಳ ಹೊತ್ತು ಗಾಜಾ ಪ್ರವೇಶಿಸಿದ 200 ಲಾರಿಗಳು
* ಕದನ ವಿರಾಮ ವಿರೋಧಿಸಿ ಪಕ್ಷದ ಸಚಿವರು ರಾಜೀನಾಮೆ ಸಲ್ಲಿಸಿದ್ದಾರೆ ಎಂದು ಇಸ್ರೇಲ್‌ನ ರಾಷ್ಟ್ರೀಯ ಭದ್ರತಾ ಸಚಿವ ಇಟಮರ್ ಬೆನ್ ವಿರ್ ಹೇಳಿಕೆ
* ಒಜ್ಮಾ ಯೆಉಡಿಟ್ ಪಕ್ಷದ ಬೆಂಬಲ ಹಿಂತೆಗೆತದಿಂದ ಬೆಂಜಮಿನ್ ನೇತನ್ಯಾಹು ನೇತೃತ್ವದ ಮೈತ್ರಿ ಸರ್ಕಾರ ತುಸು ದುರ್ಬಲಗೊಳ್ಳಲಿದೆ. ಆದರೆ ಕದನವಿರಾಮ ಜಾರಿ ಪ್ರಕ್ರಿಯೆಗೆ ಯಾವುದೇ ತೊಡಕಾಗದು
* ಹಮಾಸ್ ನೇತೃತ್ವದ ಸರ್ಕಾರದ ನಾಗರಿಕ ರಕ್ಷಣಾ ಪಡೆಯಿಂದ ಗಾಜಾದಲ್ಲಿ ಗಸ್ತು. ಸಂಭ್ರಮಾಚರಣೆ ವೇಳೆ ಕಂಡುಬಂದ ಹಮಾಸ್ ನಂತರದ ಅತಿದೊಡ್ಡ ಬಂಡುಕೋರರ ಸಂಘಟನೆಯಾದ ಇಸ್ಲಾಮಿಕ್ ಜಿಹಾದ್‌ನ ಧ್ವಜಗಳು.
* ಯುದ್ಧದ ಈ 15 ತಿಂಗಳಲ್ಲಿ ಗಾಜಾದ ಶೇ 90ರಷ್ಟು ಜನರು ಅತಂತ್ರರಾಗಿದ್ದರು. ಆರೋಗ್ಯ ವ್ಯವಸ್ಥೆ ರಸ್ತೆ ಸಂಪರ್ಕ ಇತರೆ ಮೂಲಸೌಕರ್ಯಗಳು ತೀವ್ರ ಹಾನಿಗೊಂಡಿವೆ
* ಕದನಕ್ಕೆ ಪೂರ್ಣವಿರಾಮ ಬಿದ್ದ ನಂತರ ಇವುಗಳ ಮರುನಿರ್ಮಾಣಕ್ಕೆ ಹಲವು ವರ್ಷಗಳೇ ಬೇಕಾಗಲಿದೆ ಎಂಬುದು ವಿಶ್ವಸಂಸ್ಥೆಯ ಅಂದಾಜು
ಮೂವರು ಮಹಿಳಾ ಒತ್ತೆಯಾಳುಗಳಿಗೆ ಬಂಧಮುಕ್ತಿ
ಜೆರುಸಲೇಂ: ಹಮಾಸ್ ಬಂಡುಕೋರರು ತಾವು ಮೊದಲಿಗೆ ಬಿಡುಗಡೆ ಮಾಡಲಿರುವ ಮೂವರು ಮಹಿಳಾ ಒತ್ತೆಯಾಳುಗಳ ಹೆಸರನ್ನು ಮೂರು ಗಂಟೆ ತಡವಾಗಿ ಬಹಿರಂಗಪಡಿಸಿದರು. ಅವರೆಂದರೆ ಎಮಿಲಿ ಡಮರಿ ರೊಮಿ ಗೊನೆನ್ ಮತ್ತು ಡೊರೊನ್ ಸ್ಟೀನ್‌ಬ್ರಿಚೆರ್. ಈ ಪೈಕಿ ಎಮಿಲಿ ಮತ್ತು ರೊಮಿ ಅವರನ್ನು ಕಿಬುಟ್ಜ್ ಕರ್ ಅಜಾದಿಂದ ಮತ್ತು ಗೊನೆನ್ ಅವರನ್ನು ನೊವಾ ಉತ್ಸವದ ಸ್ಥಳದಿಂದ ಅಪಹರಿಸಲಾಗಿತ್ತು. ಅಕ್ಟೋಬರ್ 7 2023ರಂದು ಇಸ್ರೇಲ್ ಮೇಲೆ ಏಕಾಏಕಿ ಅಪ್ರಚೋದಿತ ದಾಳಿ ನಡೆಸಿದ್ದ ಹಮಾಸ್ ಬಂಡುಕೋರರು ಇವರು ಸೇರಿದಂತೆ 200ಕ್ಕೂ ಅಧಿಕ ಜನರನ್ನು ಒತ್ತೆಯಾಳುಗಳಾಗಿ ಕರೆದೊಯ್ದಿದ್ದರು.
-ಗಿಡಿಯೊನ್ ಸಾರ್, ವಿದೇಶಾಂಗ ಸಚಿವ ಇಸ್ರೇಲ್‌ಒತ್ತೆಯಾಳುಗಳ ಬಿಡುಗಡೆ ಹಮಾಸ್ ಸರ್ಕಾರ ಮತ್ತು ಅದರ ಸೇನಾ ಸಾಮರ್ಥ್ಯವನ್ನು ಅಸ್ಥಿರಗೊಳಿಸುವ ಗುರಿ ಸಾಧನೆಗೆ ಇಸ್ರೇಲ್ ಬದ್ಧವಾಗಿದೆ. ಹಮಾಸ್ ಅಧಿಕಾರದಲ್ಲಿ ಇದ್ದರೆ ಭವಿಷ್ಯದಲ್ಲಿಯೂ ಅಲ್ಲಿ ಶಾಂತಿ ಉಳಿಯುವುದಿಲ್ಲ.