ಲಾಸ್ ಏಂಜಲೀಸ್: ಲಾಸ್ ಏಂಜಲೀಸ್‌ನ ಕಾಳ್ಗಿಚ್ಚು ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 16ಕ್ಕೆ ಏರಿಕೆಯಾಗಿದ್ದು, ಹಲವರು ಕಾಣೆಯಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಕಾಣೆಯಾದವರ ಬಗ್ಗೆ ದೂರು ನೀಡಲು ನಗರದಲ್ಲಿ ಕೇಂದ್ರವೊಂದನ್ನು ಸ್ಥಾಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
'ಶನಿವಾರವೂ ನಗರದಾದ್ಯಂತ ಅಲ್ಲಲ್ಲಿ ಸಣ್ಣ ಸಣ್ಣ ಕಾಳ್ಗಿಚ್ಚು ಹಬ್ಬಿದ ಪ್ರಕರಣಗಳು ನಡೆದಿವೆ. ಅವುಗಳನ್ನು ನಂದಿಸಲಾಗಿದೆ' ಎಂದು ಲಾಸ್ ಏಂಜಲೀಸ್‌ನ ಮೇಯರ್ ಕ್ಯಾರೆನ್ ಬಾಸ್ ಮಾಹಿತಿ ನೀಡಿದ್ದಾರೆ.
ಐದು ಪ್ರದೇಶಗಳಲ್ಲಿ ಹಬ್ಬಿದ ಕಾಳ್ಗಿಚ್ಚು ವ್ಯಾಪಿಸುತ್ತಲೇ ಇದೆ. ಇನ್ನೂ ಸಾವಿರಾರು ಜನರನ್ನು ಸರ್ಕಾರ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸುತ್ತಿದೆ. ಗಾಳಿಯ ವೇಗವು ತಗ್ಗುತ್ತಿಲ್ಲ. ಬೆಂಕಿಯು ವ್ಯಾಪಿಸದಂತೆ ತಡೆಯಲು ಹೆಲಿಕಾಪ್ಟರ್ ಮೂಲಕ ರಾಸಾಯನಿಕವನ್ನು ಹಿಂಪಡಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಈಟನ್ ಕೆಯಾನ್‌ನಲ್ಲಿ ಹಬ್ಬಿದ ಕಾಳ್ಗಿಚ್ಚು ನಿಯಂತ್ರಣಕ್ಕೆ ಬರುತ್ತಿಲ್ಲ. ಮಂಗಳವಾರ ಹತ್ತಿದ ಬೆಂಕಿಯನ್ನು ನಂದಿಸಲು ಸಾಧ್ಯವಾಗುತ್ತಿಲ್ಲ. ಇಲ್ಲಿನ ಶೇ 15ರಷ್ಟು ಪ್ರದೇಶದಲ್ಲಿನ ಬೆಂಕಿಯನ್ನು ಮಾತ್ರ ನಂದಿಸಲಾಗಿದೆ ಎಂದು ಹೇಳಿದ್ದಾರೆ.