ಗುವಾಹಟಿ: ಕಾಂಗ್ರೆಸ್ ಟೀಕೆಗಳಿಗೆ ತಿರುಗೇಟು ನೀಡಿರುವ ಮಣಿಪುರ ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್, ಕಾಂಗ್ರೆಸ್ ನೇತೃತ್ವದ ಸರ್ಕಾರಗಳ ಈ ಹಿಂದಿನ ಪಾಪಗಳಿಂದಾಗಿ ಮಣಿಪುರ ಇಂದು ಪ್ರಕ್ಷುಬ್ಧ ಸ್ಥಿತಿಯಲ್ಲಿದೆ ಎಂದು ಬುಧವಾರ ವಾಗ್ದಾಳಿ ಮಾಡಿದ್ದಾರೆ.
ಮೈತೇಯಿ-ಕುಕಿ ಸಂಘರ್ಷಕ್ಕೆ ಕ್ಷಮೆಯಾಚಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಇನ್ನೂ ಮಣಿಪುರಕ್ಕೆ ಏಕೆ ಭೇಟಿ ನೀಡಲಿಲ್ಲ ಎಂಬ ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಅವರ ಪ್ರಶ್ನೆಗೆ ಬಿರೇನ್ ಸಿಂಗ್ ಅವರು ಪಿ.ವಿ. ನರಸಿಂಹರಾವ್ ಮತ್ತು ಐ.ಕೆ.ಗುಜರಾಲ್ ಅವರು ಏಕೆ ಭೇಟಿ ನೀಡಿರಲಿಲ್ಲ ಎಂದು ಪ್ರಶ್ನಿಸಿದ್ದಾರೆ.
1992 ಮತ್ತು 1997ರ ನಡುವೆ ನಾಗಾ-ಕುಕಿ ಸಂಘರ್ಷ, 1997 ಮತ್ತು 1998ರ ನಡುವೆ ಪೈಟೆ-ಕುಕಿ ನಡುವೆ ಸಂಘರ್ಷ ಉದ್ಭವಿಸಿತ್ತು. ಐದು ವರ್ಷಗಳ ಕಾಲ ನಡೆದ ಈ ಎರಡು ಜನಾಂಗೀಯ ಸಂಘರ್ಷಗಳಲ್ಲಿ 1650 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು. ಆಗ ಕಾಂಗ್ರೆಸ್ ಸರ್ಕಾರದಲ್ಲಿನ ಈ ಇಬ್ಬರು ಪ್ರಧಾನಿಗಳು ಸಂಘರ್ಷಪೀಡಿತ ರಾಜ್ಯಕ್ಕೆ ಏಕೆ ಭೇಟಿ ನೀಡಲಿಲ್ಲ ಎಂದು ಸಿಂಗ್ ಪ್ರಶ್ನಿಸಿದ್ದಾರೆ.