ಗುವಾಹಟಿ: ಸಂಘರ್ಷ ಪೀಡಿತ ಮಣಿಪುರದಲ್ಲಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕುಕಿ ಸಮುದಾಯ ಶಾಂತಿ ಕಾಪಾಡಿಕೊಳ್ಳಬೇಕು ಎಂದು ಕೇಂದ್ರ ಗೃಹ ಸಚಿವಾಲಯ (ಎಂಎಚ್‌ಎ) ಶುಕ್ರವಾರ ಹೇಳಿದೆ.
ಮೈತೇಯಿ ಸಮುದಾಯದ ಕಡೆಯಿಂದಲೂ ಶಾಂತಿ ಕಾಪಾಡಿಕೊಳ್ಳುವ ಅಗತ್ಯವಿದೆ ಎಂದು ಕುಕಿ ಸಂಘಟನೆಗಳ ಪ್ರತಿನಿಧಿಗಳು ಸಚಿವಾಲಯ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಕುಕಿ ಜೋ ಸಮುದಾಯಗಳನ್ನು ಪ್ರತಿನಿಧಿಸುವ ಸರ್ವ ಸಂಘಟನೆಗಳ ವೇದಿಕೆಯಾದ ಕುಕಿ ಜೋ ಕೌನ್ಸಿಲ್‌ನ (ಕೆಜಡ್‌ಸಿ) ನಾಲ್ವರು ಸದಸ್ಯರ ನಿಯೋಗವು ಶುಕ್ರವಾರ ನವದೆಹಲಿಯಲ್ಲಿ ಖಾಸಗಿ ಹೋಟೆಲ್‌ನಲ್ಲಿ ಕೇಂದ್ರ ಗೃಹ ಸಚಿವಾಲಯದ ಅಧಿಕಾರಿಗಳನ್ನು ಭೇಟಿ ಮಾಡಿತು.
ಮೈತೇಯಿ ಮತ್ತು ಕುಕಿ ಜೋ ಬುಡಕಟ್ಟು ಸಮುದಾಯಗಳ ನಡುವೆ 2023ರಲ್ಲಿ ಸ್ಫೋಟಗೊಂಡ ಜನಾಂಗೀಯ ಸಂಘರ್ಷದ ನಂತರ ಮೊದಲ ಬಾರಿಗೆ ಇಂತಹ ಪ್ರಮುಖ ಸಭೆ ನಡೆದಿದೆ.
'ಇದು ಒಂದು ರೀತಿಯಲ್ಲಿ ಸಂಘರ್ಷ ಶಮನಗೊಳಿಸುವ ನಿಟ್ಟಿನಲ್ಲಿ ಮಹತ್ವದ ಸಭೆಯಾಗಿತ್ತು. ಸಚಿವಾಲಯದ ಅಧಿಕಾರಿಗಳು ಪರಿಹಾರ ಕಂಡುಕೊಳ್ಳುವ ಸಲುವಾಗಿ ನಮಗೆ ಶಾಂತಿ ಕಾಪಾಡಿಕೊಳ್ಳುವಂತೆ ಹೇಳಿದರು. ಆದರೆ, ನಾವು ಕೂಡ ಮೈತೇಯಿ ಕಡೆಯಿಂದಲೂ ಶಾಂತಿ ಕಾಪಾಡಿಕೊಳ್ಳಬೇಕೆಂದು ತಿಳಿಸಿದ್ದೇವೆ. ಮೈತೇಯಿ ಜನರು ದಾಳಿ ನಡೆಸುವಾಗ ನಮ್ಮ ಜನರು, ರಕ್ಷಣೆಗಾಗಿ ಪ್ರತೀಕಾರ ತೀರಿಸಿಕೊಳ್ಳುವುದನ್ನು ಬಿಟ್ಟು ನಮಗೆ ಬೇರೆ ಆಯ್ಕೆ ಇಲ್ಲ' ಎಂದು ಕೌನ್ಸಿಲ್‌ನ ವಕ್ತಾರ ಗಿಂಜಾ ವುಯಲ್‌ಜಾಂಗ್ ಸಭೆಯ ನಂತರ 'ಪ್ರಜಾವಾಣಿ'ಗೆ ದೂರವಾಣಿಯಲ್ಲಿ ತಿಳಿಸಿದರು.
ಕೌನ್ಸಿಲ್‌ನ ಅಧ್ಯಕ್ಷ ಹೆನ್ಲಿಯಾಂತಂಗ್ ತಂಗ್ಲೆಟ್ ಅವರು ಕೌನ್ಸಿಲ್ ನಿಯೋಗದ ನೇತೃತ್ವ ವಹಿಸಿದ್ದರೆ, ಈಶಾನ್ಯದ ಈ ರಾಜ್ಯಕ್ಕೆ ಗೃಹ ಸಚಿವಾಲಯದ ಸಲಹೆಗಾರರಾಗಿರುವ ಎ.ಕೆ. ಮಿಶ್ರಾ ಅವರು ಸರ್ಕಾರದ ಪರವಾಗಿ ನೇತೃತ್ವ ವಹಿಸಿದ್ದರು. ಒಂದು ಗಂಟೆಗೂ ಹೆಚ್ಚು ಕಾಲ ಸಭೆ ನಡೆಯಿತು ಎಂದು ಅವರು ತಿಳಿಸಿದರು.
ಇದೇ ವೇಳೆ ಕೌನ್ಸಿಲ್, ಗೃಹ ಸಚಿವ ಅಮಿತ್ ಶಾ ಅವರಿಗೆ ಮನವಿ ಪತ್ರ ಸಲ್ಲಿಸಿದ್ದು, ಇದರಲ್ಲಿ ಶಾಂತಿ ಮರುಸ್ಥಾಪಿಸಲು ಮತ್ತು ಸಂಘರ್ಷ ಕೊನೆಗೊಳಿಸಲು ಶಾಸಕಾಂಗ ಹೊಂದಿರುವ ಕೇಂದ್ರಾಡಳಿತ ಪ್ರದೇಶದ ಮಾದರಿಯಲ್ಲಿ 'ಪ್ರತ್ಯೇಕ ಆಡಳಿತ'ವೇ ಏಕೈಕ ಮಾರ್ಗ ಎಂದು ಪುನರುಚ್ಚರಿಸಿದೆ.