ನವದೆಹಲಿ: ಯೆಮೆನ್‌ನಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಭಾರತೀಯ ನರ್ಸ್ ನಿಮಿಷಾ ಪ್ರಿಯಾ ಪ್ರಕರಣದಲ್ಲಿ ಇರುವ ಪರ್ಯಾಯ ಆಯ್ಕೆಗಳನ್ನು ಹುಡುಕಾಡಲು ಎಲ್ಲಾ ರೀತಿಯ ನೆರವು ನೀಡಲಾಗುವುದು ಎಂದು ಭಾರತ ಮಂಗಳವಾರ ಹೇಳಿದೆ.
ಯೆಮೆನ್ ಅಧ್ಯಕ್ಷ ರಶಾದ್ ಅಲ್-ಅಲಿಮಿ ಸೋಮವಾರ ಕೇರಳದ ನರ್ಸ್‌ಗೆ ಮರಣದಂಡನೆ ಶಿಕ್ಷೆಗೆ ಅನುಮೋದನೆ ನೀಡಿದ ನಂತರ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಈ ರೀತಿಯ ಹೇಳಿಕೆ ನೀಡಿದೆ. ಯೆಮೆನ್ ಪ್ರಜೆಯನ್ನು ಕೊಂದಿದ್ದಕ್ಕಾಗಿ ನಿಮಿಷಾ ಪ್ರಿಯಾ ಮರಣ ದಂಡನೆ ಶಿಕ್ಷೆಗೆ ಗುರಿಯಾಗಿದ್ದಾರೆ.
ವರದಿಗಳ ಪ್ರಕಾರ ಒಂದು ತಿಂಗಳೊಳಗೆ ಮರಣದಂಡನೆ ಜಾರಿಯಾಗುವ ನಿರೀಕ್ಷೆಯಿದೆ. ಯೆಮೆನ್‌ನಲ್ಲಿ ನಿಮಿಷಾ ಪ್ರಿಯಾಗೆ ಶಿಕ್ಷೆಯ ಬಗ್ಗೆ ನಮಗೆ ತಿಳಿದಿದೆ. ಉಳಿದಿರುವ ಪರ್ಯಾಯ ಆಯ್ಕೆಗಳನ್ನು ಅವರ ಕುಟುಂಬ ಹುಡುಕುತ್ತಿದೆ ಎಂಬುದನ್ನು ನಾವು ಅರ್ಥ ಮಾಡಿಕೊಂಡಿದ್ದೇವೆ. ಸರ್ಕಾರ ಈ ವಿಷಯದಲ್ಲಿ ಸಾಧ್ಯವಿರುವ ಎಲ್ಲ ರೀತಿಯ ನೆರವನ್ನು ನೀಡುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ವಕ್ತಾರ ರಣದೀರ್ ಜೈಸ್ವಾಲ್ ಹೇಳಿದ್ದಾರೆ.