ಭುವನೇಶ್ವರ: ಪುರಿಯಲ್ಲಿರುವ ಜಗನ್ನಾಥ ದೇವಾಲಯವು 18ನೇ ಪ್ರವಾಸಿ ಭಾರತೀಯ ದಿವಸ (ಪಿಬಿಡಿ) ಸಮಾವೇಶದಲ್ಲಿ ಪಾಲ್ಗೊಂಡಿದ್ದ ಅನಿವಾಸಿ ಭಾರತೀಯರ ನೆಚ್ಚಿನ ತಾಣ ಎನಿಸಿಕೊಂಡಿದೆ.
'ಪುರಿ, ಖುದ್ರಾ (ಭುವನೇಶ್ವರ), ಕಟಕ್ ಮತ್ತು ಜೈಪುರ ಜಿಲ್ಲೆಗಳಲ್ಲಿ 28 ಪ್ರವಾಸಿ ತಾಣಗಳನ್ನು ಗುರುತಿಸಲಾಗಿತ್ತು.
ಪಿಬಿಡಿ ಸಮಾವೇಶದ ಮೊದಲ ಎರಡು ದಿನ (ಜನವರಿ 8, 9ರಂದು) ಇಲ್ಲಿಗೆ ಬರೋಬ್ಬರಿ 3,400 ಎನ್‌ಆರ್‌ಐಗಳು ಭೇಟಿ ನೀಡಿದ್ದಾರೆ' ಎಂದು ರಾಜ್ಯ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
'ಈ ಪೈಕಿ, ಪುರಿಯ ಜಗನ್ನಾಥ ದೇವಾಲಯಕ್ಕೆ ತೆರಳಿರುವ 2,300 ಮಂದಿ, ಕೊನಾರ್ಕ್‌ನ ಸೂರ್ಯ ದೇವಾಲಯ, ರಘುರಾಜಪುರದಲ್ಲಿರುವ ಕಲಾ ಗ್ರಾಮಕ್ಕೂ ಭೇಟಿ ನೀಡಿದ್ದಾರೆ' ಎಂದಿದ್ದಾರೆ.
ಮಾರಿಷಸ್‌ನಿಂದ ಬಂದಿರುವ ಹಿಂದೂ ಎನ್‌ಆರ್‌ಐ ಮೀನಿಕಾ ಗನೆಸ್ ಎಂಬವರು, ಮೊದಲ ಬಾರಿಗೆ ಜಗನ್ನಾಥ ದೇಗುಲಕ್ಕೆ ಹೋಗಿ ಆಶೀರ್ವಾದ ಪಡೆದೆ ಎಂದು ಹೇಳಿದ್ದಾರೆ.
ಭವಿಷ್ಯವು ಯುದ್ಧದಲ್ಲಿ ಅಲ್ಲ, ಬುದ್ಧನಲ್ಲಿದೆ: ಪ್ರಧಾನಿ ನರೇಂದ್ರ ಮೋದಿ
'ನಾಲ್ಕು ತಲೆಮಾರಿನಿಂದಲೂ ಮಾರಿಷಸ್‌ನಲ್ಲಿ ನೆಲೆಸಿದ್ದೇವೆ. ಭಾರತಕ್ಕೆ ಬಂದು ಪಿಬಿಡಿಯಲ್ಲಿ ಭಾಗವಹಿಸುವ ಅವಕಾಶ ದೊರೆಯಿತು. ಹಾಗಾಗಿ, ಇಲ್ಲಿಗೆ ಬಂದು ಜಗನ್ನಾಥ ದೇವಾಲಯಕ್ಕೆ ಭೇಟಿ ನೀಡಿದೆ. ಇದು ಅತ್ಯಂತ ಪವಿತ್ರ ಸ್ಥಳ. ಮಾರಿಷಸ್‌ನಲ್ಲೂ ಹಿಂದೂ ದೇವಾಲಯಗಳಿಗೆ ಭೇಟಿ ನೀಡುವ ನನಗಿದು ಕನಸು ನನಸಾದಂತಹ ಕ್ಷಣ' ಎಂದಿದ್ದಾರೆ.
ಒಮನ್‌ನಿಂದ ಬಂದಿರುವ ಬಾಬುಲಾಲ್ ಕನೊಜಿಯಾ, 'ಜಗನ್ನಾಥ ಮಂದಿರಕ್ಕೆ ಭೇಟಿ ನೀಡಿದ ಸಮಯ ಅದ್ಭುತವಾಗಿತ್ತು. ಒಡಿಶಾ ಭೇಟಿಯು ಯಶಸ್ವಿಯಾಗಿದೆ' ಎಂದಿದ್ದಾರೆ.
ಕೊನಾರ್ಕ್ ಮತ್ತು ಪುರಿಗೆ ಭೇಟಿ ನೀಡುವ ಯೋಜನೆಯಲ್ಲಿರುವುದಾಗಿ ಕುವೈತ್‌ನಿಂದ ಬಂದಿರುವ ರಿತ್ವಿಕ್ ಹೇಳಿದ್ದಾರೆ.