ಕೊಟ್ಟಾಯಂ: ದೇವಸ್ಥಾನ ಪ್ರವೇಶಿಸುವ ಮುನ್ನ ಪುರುಷ ಭಕ್ತರು ತಮ್ಮ ಅಂಗಿಯನ್ನು ತೆಗೆಯಬೇಕು ಎಂಬ ನಿಯಮವನ್ನು ಕೈಬಿಡಲು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿಕೆಯನ್ನು ನಾಯರ್ ಸರ್ವಿಸ್ ಸೊಸೈಟಿ (ಎನ್‌ಎಸ್‌ಎಸ್) ಪ್ರಧಾನ ಕಾರ್ಯದರ್ಶಿ ಜಿ.ಸುಕುಮಾರನ್ ನಾಯರ್ ಟೀಕಿಸಿದ್ದಾರೆ.
'ದೇವಾಲಯಗಳ ಸಂಪ್ರದಾಯಗಳ ವಿಚಾರದಲ್ಲಿ ಬೇರೆಯವರು ಮಧ್ಯಪ್ರವೇಶಿಸಬಾರದು. ಪ್ರತಿ ದೇವಾಲಯಕ್ಕೆ ತನ್ನದೇ ಆದ ಸಂಪ್ರದಾಯಗಳಿದ್ದು, ಸರ್ಕಾರ ಅಥವಾ ವ್ಯಕ್ತಿಗಳು ಬದಲಾಯಿಸಲು ಹೋಗಬಾರದು' ಎಂದು ನಾಯರ್ ಪ್ರತಿಕ್ರಿಯಿಸಿದ್ದಾರೆ.
ಕಾರ್ಯಕ್ರಮ ಉದ್ಘಾಟಿಸಿದ ಕೇರಳದ ಹಿರಿಯ ಕಾಂಗ್ರೆಸ್ ಮುಖಂಡ ರಮೇಶ್ ಚೆನ್ನಿತ್ತಲ ಅವರ ಮುಂದೆಯೇ ಈ ಹೇಳಿಕೆ ನೀಡಿದ್ದಾರೆ.
ಚಂಗನಶ್ಶೇರಿಯ ಎನ್‌ಎಸ್‌ಎಸ್‌ನ ಪ್ರಧಾನ ಕಚೇರಿಯಲ್ಲಿ ಗುರುವಾರ ನಡೆದ 'ಮನ್ನತ್ತು ಪದ್ಮನಾಭನ್ ಜಯಂತಿ' ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, 'ಕೇವಲ ಹಿಂದೂ ಸಮುದಾಯದ ವಿಚಾರಗಳಿಗೆ ಇಂತಹ ವ್ಯಾಖ್ಯಾನ ಮಾಡಲಾಗುತ್ತದೆ. ಕ್ರೈಸ್ತರು, ಮುಸಲ್ಮಾನರು ಕೂಡ ತಮ್ಮದೇ ಸಂಪ್ರದಾಯಗಳನ್ನು ಹೊಂದಿದ್ದಾರೆ. ಮುಖ್ಯಮಂತ್ರಿ ಹಾಗೂ ಶಿವಗಿರಿ ಮಠದವರು ಇದನ್ನು ಪ್ರಶ್ನಿಸುವ ಧೈರ್ಯ ಮಾಡುತ್ತಾರೆಯೇ' ಎಂದು ನಾಯರ್ ಪ್ರಶ್ನಿಸಿದ್ದಾರೆ.
ಶಬರಿಮಲೆಗೆ ಶ್ರೀ ಅಯ್ಯಪ್ಪ ದೇವಾಲಯಕ್ಕೆ ಮಹಿಳೆಯರ ಪ್ರವೇಶಾತಿ ವಿರುದ್ಧ ಸುಕುಮಾರನ್ ನೇತೃತ್ವದಲ್ಲಿಯೇ ಹೋರಾಟ ನಡೆಸಲಾಗಿತ್ತು.