ಮುಂಬೈ: ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ಇಲ್ಲಿ ಎರಡು ದಿನ ಬಿಜೆಪಿ ಮತ್ತು ಇತರೆ ಸಹಯೋಗಿ ಸಂಘಟನೆಗಳ ಪದಾಧಿಕಾರಿಗಳ ಸಭೆಯನ್ನು ನಡೆಸಿತು.
ಆರ್‌ಎಸ್‌ಎಸ್ ಜಂಟಿ ಕಾರ್ಯದರ್ಶಿ ಅತುಲ್ ಲಿಮಯೆ ಅಧ್ಯಕ್ಷತೆಯಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಬಿಜೆಪಿ ಹೊರತುಪಡಿಸಿ ವಿಶ್ವ ಹಿಂದೂ ಪರಿಷತ್, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮತ್ತು ಇತರೆ ಸಂಘಟನೆಗಳ ಪದಾಧಿಕಾರಿಗಳಿದ್ದರು.
ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್, ಸಚಿವರಾದ ಚಂದ್ರಕಾಂತ ಪಾಟೀಲ, ಚಂದ್ರಶೇಖರ ಬಾವಂಕುಲೆ ಮತ್ತು ಇತರೆ ಬಿಜೆಪಿ ನಾಯಕರು ಪಾಲ್ಗೊಂಡಿದ್ದರು.
ಬರುವ ದಿನಗಳಲ್ಲಿ ನಡೆಯಲಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಕಾರಣದಿಂದಾಗಿ ಈ ಸಭೆಯು ಮಹತ್ವದ್ದಾಗಿದೆ. ರಾಜ್ಯದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟದ ಭಾರಿ ಗೆಲುವಿನ ನಂತರ ನಡೆದ ಪ್ರಥಮ ಸಭೆ ಆಗಿದೆ.
ಆರ್‌ಎಸ್‌ಎಸ್‌ನ ಪದಾಧಿಕಾರಿಯೊಬ್ಬರು, 'ಇದು ಆರು ತಿಂಗಳಿಗೆ ಒಮ್ಮೆ ಪ್ರಗತಿಯನ್ನು ಪರಿಶೀಲಿಸಲು ನಡೆಯಲಿರುವ ಸಾಮಾನ್ಯ ಸಭೆಯಾಗಿದೆ' ಎಂದು ಪ್ರತಿಕ್ರಿಯಿಸಿದರು.