ಪಟ್ನಾ: ಎಸ್‌ಸಿ, ಎಸ್‌ಟಿ ಹಾಗೂ ಒಬಿಸಿಗಳಿಗೆ ನಿಗದಿಪಡಿಸಿರುವ ಶೇ 50ರಷ್ಟು ಮೀಸಲಾತಿ ಮಿತಿ ಸಾಲುವುದಿಲ್ಲ ಎಂದು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಪ್ರತಿಪಾದಿಸಿದ್ದಾರೆ.
ಬಿಹಾರದ ಪಟ್ನಾದಲ್ಲಿ ನಡೆದ 'ಸಂವಿಧಾನ ಸುರಕ್ಷಾ ಸಮ್ಮೇಳನ'ದಲ್ಲಿ ಅವರು ಮಾತನಾಡಿದರು.
'ಬಹುಜನರ ಲಾಭಕ್ಕಾಗಿ ನಾವು ಮಿತಿಯನ್ನು ತೆಗೆದುಹಾಕುತ್ತೇವೆ. ಆರ್‌ಎಸ್‌ಎಸ್ ಸಹಿತ ಕೆಲವೊಂದು ಆಯ್ದ ಸಂಸ್ಥೆಗಳು ಹಾಗೂ ಅದರ ಜನರು, ಉದ್ಯಮಪತಿಗಳು ದೇಶವನ್ನು ನಿಯಂತ್ರಿಸುತ್ತಿದ್ದಾರೆ' ಎಂದು ಆವರು ಆರೋಪಿಸಿದ್ದಾರೆ.
ದೇಶದ ಸಂವಿಧಾನ ಕೇವಲ ಪುಸ್ತಕವಲ್ಲ. ಅದು ದಲಿತರ ಮೇಲಿನ ದೌರ್ಜನ್ಯ ಹಾಗೂ ಅವರ ಕಷ್ಟಗಳ ಬಗ್ಗೆಯೂ ಮಾತನಾಡುತ್ತದೆ ಎಂದು ಅವರು ಹೇಳಿದ್ದಾರೆ.
ಇದೇ ವೇಳೆ ಬಿಹಾರದ ನಿತೀಶ್ ಕುಮಾರ್ ನೇತೃತ್ವದ ಸರ್ಕಾರ ನಡೆಸಿರುವ ಜಾತಿಗಣತಿಯ ವಿರುದ್ಧ ಕಿಡಿ ಕಾರಿರುವ ಅವರು, ಅದು ಬಿಹಾರದ ಜನರನ್ನು ಮೋಸ ಮಾಡಲು ನಡೆಸಿದ ಗಣತಿ ಎಂದು ಹೇಳಿದ್ದಾರೆ. ಅಲ್ಲದೆ ಜಾತಿ ಗಣತಿ ಮಾಡಲೇಬೇಕು ಎನ್ನುವ ನಿರ್ಧಾರಕ್ಕೆ ತಮ್ಮ ಪಕ್ಷ ಅಚಲವಾಗಿರಲಿದೆ. ದೇಶದ ಅಭಿವೃದ್ಧಿಗೆ ಜಾತಿಗಣತಿ ಅಗತ್ಯ ಎಂದಿದ್ದಾರೆ.
'ದಲಿತರು, ಅಲ್ಪಸಂಖ್ಯಾತರು ಹಾಗೂ ಸಾಮಾಜಿಕವಾಗಿ ಹಿಂದುಳಿದವರು ದೇಶದ ಜನಸಂಖ್ಯೆಯಲ್ಲಿ ಶೇ 90ರಷ್ಟಿದ್ದಾರೆ. ಆದರೆ ಅವರು ಇಂದಿಗೂ ವ್ಯವಸ್ಥೆಯ ಭಾಗವಾಗಿಲ್ಲ. ಇದಕ್ಕಾಗಿಯೇ ನಾವು ಜಾತಿಗಣತಿಗೆ ಆಗ್ರಹಿಸುತ್ತಿದ್ದೇವೆ. 'ಅಧಿಕಾರಿ ವರ್ಗದಲ್ಲಿ ಹಾಗೂ ಇತರ ವಲಯಗಳಲ್ಲಿ ಒಬಿಸಿ, ದಲಿತರ ಪಾಲುದಾರಿಕೆ ಎಷ್ಟು ಎಂದು ತಿಳಿಯಲು ಜಾತಿಗಣತಿ ಅಗತ್ಯ' ಎಂದು ಹೇಳಿದ್ದಾರೆ.
ಬಿಜೆಪಿ ಹಾಗೂ ಆರ್‌ಎಸ್‌ಎಸ್‌ನವರು ಸಂವಿಧಾನವನ್ನು ದುರ್ಬಲಗೊಳಿಸಿ, ಶೋಷಿತ ಸಮಾಜಗಳನ್ನು ನಿರ್ಲಕ್ಷಿಸುತ್ತಿದ್ದಾರೆ. ದೇಶದ ಸ್ವಾತಂತ್ರ್ಯದ ಕುರಿತು ಮೋಹನ್ ಭಾಗವತ್ ಅವರ ಹೇಳಿಕೆಯು ಸಂವಿಧಾನ ವಿರೋಧಿ ಎಂದು ಪುನರುಚ್ಛರಿಸಿದ್ದಾರೆ.