ನವದೆಹಲಿ: 2024ರ ನವೆಂಬರ್ 5ರಿಂದ ನವೆಂಬರ್ 18ರ ನಡುವೆ ಕೋರ್ಸ್ ತೊರೆದ ಅರ್ಜಿದಾರರಿಗೆ ಜೆಇಇ-ಅಡ್ವಾನ್ಸ್ಡ್ ಪರೀಕ್ಷೆಗೆ ಹೆಸರು ನೋಂದಾಯಿಸಿಕೊಳ್ಳಲು ಸುಪ್ರೀಂ ಕೋರ್ಟ್ ಅವಕಾಶ ನೀಡಿದೆ.
ಜೆಇಇ-ಅಡ್ವಾನ್ಸ್ಡ್ ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯುವ ಅವಕಾಶವನ್ನು ಮೂರರಿಂದ ಎರಡಕ್ಕೆ ಇಳಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಬಿ.ಆರ್.
ಗವಾಯಿ ಮತ್ತು ಆಗಸ್ಟಿನ್ ಜಾರ್ಜ್ ಮಸೀಹ್ ಅವರು ಇರುವ ಪೀಠವು ಈ ಆದೇಶ ನೀಡಿದೆ.
ಜೆಇಇ-ಅಡ್ವಾನ್ಸ್ಡ್ ಪರೀಕ್ಷೆಯನ್ನು ನಡೆಸುವ ಹೊಣೆ ಹೊತ್ತಿರುವ 'ಜಂಟಿ ಪ್ರವೇಶ ಮಂಡಳಿ'ಯು (ಜೆಎಬಿ) ಕಳೆದ ವರ್ಷದ ನವೆಂಬರ್ 5ರಂದು ಪತ್ರಿಕಾ ಪ್ರಕಟಣೆಯೊಂದನ್ನು ಹೊರಡಿಸಿ, 2023, 2024 ಮತ್ತು 2025ನೆಯ ಶೈಕ್ಷಣಿಕ ವರ್ಷಗಳಲ್ಲಿ 12ನೆಯ ತರಗತಿ ಪರೀಕ್ಷೆಯನ್ನು ಬರೆದವರು ಜೆಇಇ-ಅಡ್ವಾನ್ಸ್ಡ್ ಪರೀಕ್ಷೆಗೆ ಹಾಜರಾಗಲು ಅರ್ಹ ಎಂದು ಹೇಳಿತ್ತು ಎಂಬುದನ್ನು ಕೋರ್ಟ್ ದಾಖಲಿಸಿಕೊಂಡಿದೆ.
ಆದರೆ ನವೆಂಬರ್ 18ರಂದು ಇನ್ನೊಂದು ಪತ್ರಿಕಾ ಪ್ರಕಟಣೆ ಹೊರಡಿಸಿದ ಜೆಎಬಿ, 2024 ಮತ್ತು 2025ರಲ್ಲಿ ಪರೀಕ್ಷೆ ಬರೆದವರು ಮಾತ್ರ ಜೆಇಇ-ಅಡ್ವಾನ್ಸ್ಡ್ ಪರೀಕ್ಷೆ ಬರೆಯಲು ಅರ್ಹರು ಎಂದು ಹೇಳಲಾಯಿತು.
'ನವೆಂಬರ್ 5ರ ಪತ್ರಿಕಾ ಹೇಳಿಕೆ ಆಧರಿಸಿ ವಿದ್ಯಾರ್ಥಿಗಳು ತಮ್ಮ ಕೋರ್ಸ್ ತೊರೆದಿದ್ದಲ್ಲಿ, ನವೆಂಬರ್ 18ರ ಪತ್ರಿಕಾ ಹೇಳಿಕೆಯು ಈ ವಿದ್ಯಾರ್ಥಿಗಳಿಗೆ ತೊಂದರೆ ಉಂಟುಮಾಡಲು ಅವಕಾಶ ಕೊಡಲಾಗದು' ಎಂದು ಪೀಠವು ಹೇಳಿದೆ.
ನವೆಂಬರ್ 5ರ ಪತ್ರಿಕಾ ಹೇಳಿಕೆಯಲ್ಲಿನ ಮಾತು ಆಧರಿಸಿ ತಾವು ಕೋರ್ಸ್ ತೊರೆದು, ಪ್ರತಿಷ್ಠಿತ ಐಐಟಿಗಳಲ್ಲಿ ಪ್ರವೇಶಕ್ಕಾಗಿ ಜೆಇಇ-ಅಡ್ವಾನ್ಸ್ಡ್ ಪರೀಕ್ಷೆಗೆ ಸಿದ್ಧತೆ ನಡೆಸಲು ಆರಂಭಿಸಿದ್ದಾಗಿ ಅರ್ಜಿದಾರರು ಪೀಠಕ್ಕೆ ವಿವರಿಸಿದರು.