ನವದೆಹಲಿ: 1991ರ ಮುಸ್ಲಿಂ ಮಹಿಳೆಯರ ಮದುವೆ ಹಕ್ಕುಗಳ ರಕ್ಷಣೆ ಕಾಯ್ದೆಯನ್ನು ಉಲ್ಲಂಘಿಸಿ, ಸಂಗಾತಿಗೆ ತ್ವರಿತ ವಿಚ್ಛೇದನ ನೀಡಲು ತ್ರಿವಳಿ ತಲಾಖ್ ಹೇಳಿದ್ದ ಪುರುಷರ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಮತ್ತು ಚಾರ್ಜ್‌ಶೀಟ್‌ಗಳ ಸಂಖ್ಯೆಯ ವಿವರಗಳನ್ನು ನೀಡುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರವನ್ನು ಕೇಳಿದೆ.
ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ಸಂಜಯ್ ಕುಮಾರ್ ಅವರನ್ನೊಳಗೊಂಡ ಪೀಠ, 1991ರ ಕಾನೂನಿನ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿದ್ದ 12 ಅರ್ಜಿಗಳ ವಿಚಾರಣೆ ನಡೆಸಿತು. ಅರ್ಜಿಗಳಿಗೆ ತಮ್ಮ ಲಿಖಿತ ಸಲ್ಲಿಕೆಗಳನ್ನು ಮಾಡುವಂತೆ ಕೇಂದ್ರ ಮತ್ತು ಇತರರಿಗೆ ಆದೇಶಿಸಿದೆ.
ಮಾರ್ಚ್ 17ರಿಂದ ಆರಂಭವಾಗುವ ವಾರದಲ್ಲಿ ಅರ್ಜಿಗಳ ಅಂತಿಮ ವಿಚಾರಣೆಯನ್ನು ಪೀಠ ನಿಗದಿಪಡಿಸಿದೆ.
ಕೋಯಿಕ್ಕೋಡ್ ಮೂಲದ ಮುಸ್ಲಿಂ ಸಂಘಟನೆಯಾದ ಸಮಸ್ತ ಕೇರಳ ಜಮೀಯತುಲ್ ಉಲೇಮಾ ಪ್ರಮುಖ ಅರ್ಜಿ ಸಲ್ಲಿಸಿದೆ.
'ಪ್ರತಿವಾದಿ ಕೇಂದ್ರ ಸರ್ಕಾರವು ಮುಸ್ಲಿಂ ಮಹಿಳೆಯರ ವಿವಾಹ ಹಕ್ಕುಗಳ ರಕ್ಷಣೆ ಕಾಯ್ದೆ 2019ರ ಸೆಕ್ಷನ್ 3 ಮತ್ತು 4ರ ಅಡಿಯಲ್ಲಿ ಬಾಕಿ ಉಳಿದಿರುವ ಒಟ್ಟು ಎಫ್‌ಐಆರ್‌ಗಳು ಮತ್ತು ಚಾರ್ಜ್‌ಶೀಟ್‌ಗಳನ್ನು ಸಲ್ಲಿಸಬೇಕು. ತಮ್ಮ ತಕರಾರು ಕುರಿತಂತೆ ಪಕ್ಷಗಳು ಮೂರು ಪುಟಗಳನ್ನು ಮೀರದ ಲಿಖಿತ ಸಲ್ಲಿಕೆಗಳನ್ನು ಮಾಡಬೇಕು' ಎಂದು ಪೀಠ ಹೇಳಿದೆ.
'ತಲಾಕ್-ಎ-ಬಿದ್ದತ್' ಎಂದೂ ಕರೆಯಲ್ಪಡುವ ತ್ವರಿತ 'ತ್ರಿವಳಿ ತಲಾಖ್' ತ್ವರಿತ ವಿಚ್ಛೇದನವಾಗಿದ್ದು, ಮುಸ್ಲಿಂ ಪುರುಷನು ತನ್ನ ಹೆಂಡತಿಯನ್ನು ಕಾನೂನುಬದ್ಧವಾಗಿ ಒಂದೇ ಬಾರಿಗೆ ಮೂರು ಬಾರಿ 'ತಲಾಖ್' ಎಂದು ಉಚ್ಚರಿಸುವ ಮೂಲಕ ವಿಚ್ಛೇದನ ಮಾಡಬಹುದು.
ಕಾನೂನಿನ ಅಡಿಯಲ್ಲಿ, ತ್ವರಿತ 'ತ್ರಿವಳಿ ತಲಾಖ್' ಅನ್ನು ಕಾನೂನುಬಾಹಿರ ಮತ್ತು ಅಸಿಂಧು ಎಂದು ಘೋಷಿಸಲಾಗಿದೆ. ಇದರನ್ವಯ, ವಿಚ್ಛೇದನ ನೀಡಿದವರಿಗೆ ಮೂರು ವರ್ಷ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ.