ಚೆನ್ನೈ: ತಮಿಳುನಾಡಿನ ಪಾನೀಪುರಿ ಮಾರಾಟಗಾರನ ದುಡಿಮೆ ವಾರ್ಷಿಕ 40 ಲಕ್ಷ ರೂಪಾಯಿ ದಾಟಿದ ಹಿನ್ನಲೆಯಲ್ಲಿ ಕೇಂದ್ರ ಆದಾಯ ತೆರಿಗೆ ಇಲಾಖೆ ತೆರಿಗೆ ನೋಟಿಸ್ ನೀಡಿದೆ.
ಹೌದು.. ವರ್ಷಾನುಗಟ್ಟಲೆ ಪದವಿ, ಸ್ನಾತಕೋತ್ತರ ಪದವಿಗಳನ್ನು ಓದಿ.. ತರಹೇವಾರಿ ಕೋರ್ಸ್ ಗಳನ್ನು ಮಾಡಿದರೂ ಸೂಕ್ತ ಉದ್ಯೋಗ ಸಿಗದ ಈ ಕಾಲದಲ್ಲಿ ಇಲ್ಲೋರ್ವ ಪಾನಿಪುರಿ ಮಾರಾಟಗಾರ ವಾರ್ಷಿಕ 40 ಲಕ್ಷ ರೂ ಸಂಪಾದನೆ ಮಾಡಿ ಆದಾಯ ಇಲಾಖೆ ಕೆಂಗಣ್ಣಿಗೆ ಗುರಿಯಾಗಿದ್ದಾನೆ.
ಅಚ್ಚರಿಯಾದರೂ ಇದು ಸತ್ಯ.. ತಮಿಳುನಾಡಿನಲ್ಲಿ ಪಾನಿಪುರಿ ಮಾರಾಟಗಾರನ ವಾರ್ಷಿಕ ಆದಾಯ 40 ಲಕ್ಷ ರೂ ದಾಟಿದ ಕಾರಣಕ್ಕೇ ಕೇಂದ್ರ ಆದಾಯ ತೆರಿಗೆ ಇಲಾಖೆ ತೆರಿಗೆ ನೋಟಿಸ್ ಜಾರಿ ಮಾಡಿದೆ. ನೋಟಿಸ್ ನಲ್ಲಿ ಮಾರಾಟಗಾರನು GST ಕಾಯ್ದೆ ಅಡಿಯಲ್ಲಿ ನಮೂದಿಸಲಾದ ಮಿತಿಯನ್ನು ಮೀರಿದ ಸರಕು ಮತ್ತು ಸೇವೆಗಳ ಹೊರಗಿನ ಪೂರೈಕೆಗಾಗಿ ಪಾವತಿಗಳನ್ನು ಸ್ವೀಕರಿಸಿದ್ದಾನೆ ಎನ್ನುವ ಕಾರಣಕ್ಕೆ ಆತನ ಆದಾಯದ ಮೇಲೆ ಜಿಎಸ್‌ಟಿ ಹಾಕಲಾಗಿದೆ ಎಂದು ತಿಳಿಸಿದೆ.
ವಾರ್ಷಿಕವಾಗಿ ಲಕ್ಷಗಟ್ಟಲೆ ವಹಿವಾಟು ನಡೆಸಿರುವ ಪಾನಿಪುರಿ ಭಯ್ಯಾ... ಯಾವುದೇ ಜಿಎಸ್‌ಟಿ ಪಾವತಿಸಿಲ್ಲ, ಜಿಎಸ್‌ಟಿ ವ್ಯಾಪ್ತಿಗೂ ತನ್ನ ವ್ಯಾಪಾರವನ್ನು ಒಳಪಡಿಸಿಲ್ಲ ಎನ್ನುವ ಆರೋಪ ಕೇಳಿಬಂದಿದೆ.
ಸ್ಪಷ್ಟನೆ ಕೋರಿದ ಇಲಾಖೆ
ಅಂತೆಯೇ GST ಕಾಯ್ದೆಯ ಸೆಕ್ಷನ್ 22(1) ರ ಅಡಿಯಲ್ಲಿ, ಸರಕು ಅಥವಾ ಸೇವೆಗಳ ಪೂರೈಕೆಯಲ್ಲಿ ತೊಡಗಿರುವ ಯಾವುದೇ ಪೂರೈಕೆದಾರರು ತಮ್ಮ ಒಟ್ಟು ವಹಿವಾಟು ನಿಗದಿತ ಮೊತ್ತಕ್ಕಿಂತ ಹೆಚ್ಚಿದ್ದರೆ GST ನೋಂದಣಿಯನ್ನು ಪಡೆಯಬೇಕಾಗುತ್ತದೆ. ಆರ್ಥಿಕ ವರ್ಷದಲ್ಲಿ 20 ಲಕ್ಷ ರೂ. ತೆರಿಗೆ ಮೂಲವನ್ನು ವಿಸ್ತರಿಸಲು ಮತ್ತು ಆದಾಯ ಸೋರಿಕೆಯನ್ನು ನಿಯಂತ್ರಿಸಲು ಸರ್ಕಾರ ಕೆಲಸ ಮಾಡುತ್ತಿದೆ.
ಡಿಜಿಟಲ್ ಪಾವತಿ ಡೇಟಾವನ್ನು ನಿಯಂತ್ರಿಸುವುದು ಹೆಚ್ಚಿನ ವ್ಯವಹಾರಗಳನ್ನು ತೆರಿಗೆ ನಿವ್ವಳ ಅಡಿಯಲ್ಲಿ ತರಲು ಅಂತಹ ಒಂದು ಕ್ರಮವಾಗಿದೆ. ಈಗ ಸದ್ಯ ಈತನಿಗೆ ನೀಡಿರುವ ಜಿಎಸ್‌ಟಿ ನೋಟಿಸ್ ಕೇವಲ ಸಮನ್ಸ್ ಆಗಿದೆಯೇ ಹೊರತು ಬೇಡಿಕೆಯ ಆದೇಶವಲ್ಲ. ಈ ಬಗ್ಗೆ ಮಾರಾಟಗಾರನ ಅಹವಾಲನ್ನು ಆಲಿಸಲಾಗುವುದು ಎಂದು ಮೂಲಗಳು ಹೇಳಿವೆ.
UPI ಪೇಮೆಂಟ್ ತಂದ ಸಂಕಷ್ಟ
ಇನ್ನು ಪಾನಿಪುರಿ ಮಾರಾಟಗಾರನ ಆದಾಯ ಬಹಿರಂಗವಾಗಿದ್ದು ಆತನ UPI ಪೇಮೆಂಟ್ ಗಳಿಂದ ಎಂದು ಹೇಳಲಾಗಿದೆ. ಮಾರಾಟಗಾರನ UPI ಪಾವತಿಗಳನ್ನು ಆದಾಯ ಇಲಾಖೆ ಟ್ರ್ಯಾಕ್ ಮಾಡಿದ್ದು, ಈ ವೇಳೆ ಸುಮಾರು 40 ಲಕ್ಷ ಆದಾಯ ಬಂದಿರುವುದು ತಿಳಿದು ಬಂದಿದ್ದು ಇದೇ ಕಾರಣಕ್ಕೆ ತಮಿಳುನಾಡು GST ಇಲಾಖೆ ಸಮನ್ಸ್ ಜಾರಿ ಮಾಡಿದೆ. ಪ್ರಮುಖ ಪಾವತಿ ಗೇಟ್‌ವೇಗಳು, Razorpay ಮತ್ತು PhonePe ನಿಂದ ಪಡೆದ ವಹಿವಾಟಿನ ವರದಿಗಳನ್ನು ಆಧರಿಸಿ ತಮಿಳುನಾಡು ಸರ್ಕಾರ ಈ ಕ್ರಮ ತೆಗೆದುಕೊಂಡಿದೆ.
ನೋಟಿಸ್ ವೈರಲ್
ಈ ನೋಟಿಸ್ ಕೂಡ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೋಟಿಸ್‌ನಲ್ಲಿ ಪಾನಿಪುರಿ ಅಂಗಡಿಯವನ 2023-2024ನೇ ಸಾಲಿನ ವಹಿವಾಟು ಬರೋಬ್ಬರಿ 40,11,019 ರೂಪಾಯಿ ಎಂದು ಉಲ್ಲೇಖಿಸಿದೆ.