ಅರ್ಲಿಂಗ್ಟನ್ : ಅಮೆರಿಕನ್ ಏರ್‌ಲೈನ್ಸ್‌ಗೆ ಸೇರಿದ ಪ್ರಯಾಣಿಕರ ಜೆಟ್ ವಿಮಾನವೊಂದು ಸೇನಾ ಹೆಲಿಕಾಪ್ಟರ್‌ಗೆ ಡಿಕ್ಕಿ ಹೊಡೆದು ನದಿಯಲ್ಲಿ ಪತನಗೊಂಡಿದೆ.
60 ಪ್ರಯಾಣಿಕರು ಮತ್ತು ನಾಲ್ವರು ಸಿಬ್ಬಂದಿ ಸೇರಿದಂತೆ ಒಟ್ಟು 64 ಮಂದಿ ಜೆಟ್‌ನಲ್ಲಿದ್ದರು. ತರಬೇತಿ ಹಾರಾಟ ನಡೆಸುತ್ತಿದ್ದ ಸೇನಾ ಹೆಲಿಕಾಪ್ಟರ್‌ನಲ್ಲಿ ಮೂವರು ಯೋಧರು ಪ್ರಯಾಣಿಸುತ್ತಿದ್ದರು.
'ದುರಂತದಲ್ಲಿ ಯಾರೂ ಬದುಕುಳಿದಿರುವ ಸಾಧ್ಯತೆಯಿಲ್ಲ' ಎಂದು ಅಧಿಕಾರಿಗಳು ತಿಳಿಸಿದ್ದಾರೆ.
'ದುರಂತದಲ್ಲಿ ಬದುಕುಳಿದವರು ಇದ್ದಾರೆ ಎಂದು ಈ ಹಂತದಲ್ಲಿ ನಾವು ಭಾವಿಸುವುದಿಲ್ಲ. ಹೆಲಿಕಾಪ್ಟರ್‌ನಲ್ಲಿದ್ದ ಒಬ್ಬರದ್ದು ಸೇರಿದಂತೆ ಒಟ್ಟು 28 ಮೃತದೇಹಗಳನ್ನು ನದಿಯಿಂದ ಹೊರತೆಗೆಯಲಾಗಿದೆ' ಎಂದು ವಾಷಿಂಗ್ಟನ್‌ನ ಅಗ್ನಿಶಾಮಕ ದಳದ ಮುಖ್ಯಸ್ಥ ಜಾನ್ ಡಾನೆಲಿ ಗುರುವಾರ ಬೆಳಿಗ್ಗೆ ಹೇಳಿದ್ದಾರೆ.
ವಾಷಿಂಗ್ಟನ್ ಸಮೀಪದ ರೊನಾಲ್ಡ್ ರೇಗನ್ ವಿಮಾನ ನಿಲ್ದಾಣದ ಬಳಿ ಸ್ಥಳೀಯ ಕಾಲಮಾನ ಬುಧವಾರ ರಾತ್ರಿ 9ಕ್ಕೆ ಈ ದುರಂತ ನಡೆದಿದೆ. ಇಲ್ಲಿ ತೀವ್ರ ಚಳಿಯ ಕಾರಣ ಪೊಟೋಮೆಕ್ ನದಿಯ ನೀರು ಅಲ್ಲಲ್ಲಿ ಹೆಪ್ಪುಗಟ್ಟಿದೆ. ಇದರಿಂದ ರಕ್ಷಣಾ ತಂಡದ ಸಿಬ್ಬಂದಿಗೆ ಸವಾಲು ಎದುರಾಗಿದೆ.
ರೊನಾಲ್ಡ್ ರೇಗನ್ ನಿಲ್ದಾಣದ ರನ್‌ವೇ 33ರಲ್ಲಿ ಇಳಿಯಲು ಜೆಟ್‌ನ ಪೈಲಟ್‌ಗೆ ಏರ್ ಟ್ರಾಫಿಕ್ ಕಂಟ್ರೋಲರ್ ಅನುಮತಿ ನೀಡಿದ್ದರು. ಇದರಿಂದ ಪೈಲಟ್ ಜೆಟ್‌ಅನ್ನು ಇಳಿಸಲು ಮುಂದಾಗಿದ್ದರು. ರನ್‌ವೇ ತಲುಪಲು ಕೇವಲ 2,400 ಅಡಿಗಳು ಇರುವಾಗ ಪೊಟೋಮೆಕ್ ನದಿಯ ಮೇಲೆ ಹೆಲಿಕಾಪ್ಟರ್‌ಗೆ ಡಿಕ್ಕಿಯಾಗಿದೆ.
'ಬೊಂಬಾರ್ಡಿಯೆ ಸಿಆರ್‌ಜೆ-701' ಎರಡು ಎಂಜಿನ್ ಹೊಂದಿರುವ ಜೆಟ್‌ಅನ್ನು ಕೆನಡಾದಲ್ಲಿ 2004ರಲ್ಲಿ ನಿರ್ಮಿಸಲಾಗಿತ್ತು. ಈ ಜೆಟ್‌ನಲ್ಲಿ ಗರಿಷ್ಠ 70 ಮಂದಿ ಪ್ರಯಾಣಿಸಬಹುದು.
ಅಪಘಾತಕ್ಕೆ 30 ಸೆಕೆಂಡುಗಳ ಮುನ್ನ ಹೆಲಿಕಾಪ್ಟರ್‌ಗೆ ರೇಡಿಯೊ ಕಾಲ್ ಮಾಡಿದ್ದ ಏರ್ ಟ್ರಾಫಿಕ್ ಕಂಟ್ರೋಲರ್, ಲ್ಯಾಂಡಿಂಗ್ ಆಗುತ್ತಿರುವ ವಿಮಾನ ನಿಮಗೆ ಗೋಚರಿಸುತ್ತಿದೆಯೇ ಎಂದು ಕೇಳಿದ್ದರು. ಅದರ ಬೆನ್ನಲ್ಲೇ, 'ವಿಮಾನ ಸಾಗಿದ ಬಳಿಕ ಆ ಮಾರ್ಗದಲ್ಲಿ ಮುಂದುವರಿಯಿರಿ' ಎಂಬ ಸಂದೇಶವನ್ನೂ ಕಳುಹಿಸಿದ್ದರು. ಇದಾದ ಕೆಲವೇ ಸೆಕೆಂಡುಗಳಲ್ಲಿ ಡಿಕ್ಕಿ ಸಂಭವಿಸಿದೆ.
ಅಮೆರಿಕದ ಕ್ಯಾನ್ಸಸ್ ರಾಜ್ಯದ ವಿಚಿಟಾದಿಂದ ಪ್ರಯಾಣ ಆರಂಭಿಸಿದ್ದ ಜೆಟ್‌ನಲ್ಲಿದ್ದವರಲ್ಲಿ ಹೆಚ್ಚಿನವರು ಅಮೆರಿಕ ಮತ್ತು ರಷ್ಯಾದ ಫಿಗರ್ ಸ್ಕೇಟಿಂಗ್ ಸ್ಪರ್ಧಿಗಳು ಮತ್ತು ಅವರ ಕೋಚ್‌ಗಳು ಆಗಿದ್ದಾರೆ. 1994ರ ವಿಶ್ವ ಫಿಗರ್ ಸ್ಕೇಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಗೆದ್ದಿದ್ದ ರಷ್ಯಾದ ಎವ್ಗೆನಿಯಾ ಶಿಶ್ಕೊವಾ ಮತ್ತು ವಾದಿಮ್ ನೌಮೊವ್ ದಂಪತಿ ಕೂಡಾ ವಿಮಾನದಲ್ಲಿದ್ದರು.
ವಿಚಿಟಾದಲ್ಲಿ ನಡೆದ ಯುಎಸ್ ಫಿಗರ್ ಸ್ಪೇಟಿಂಗ್ ಚಾಂಪಿಯನ್‌ಷಿಪ್ ಮತ್ತು ಆ ಬಳಿಕದ ತರಬೇತಿ ಶಿಬಿರದಲ್ಲಿ ಪಾಲ್ಗೊಂಡು ಅವರು ವಾಪಸಾಗುತ್ತಿದ್ದರು.