ನ್ಯೂಯಾರ್ಕ್: 'ಸುಡಾನ್‌ನಲ್ಲಿ ಆರೋಗ್ಯ ಕಾರ್ಯಕರ್ತರು ಮತ್ತು ಸೌಲಭ್ಯಗಳ ಮೇಲಿನ ದಾಳಿಯನ್ನು ತಕ್ಷಣ ನಿಲ್ಲಿಸುವಂತೆ' ವಿಶ್ವ ಆರೋಗ್ಯ ಸಂಸ್ಥೆಯ(ಡಬ್ಲ್ಯೂಎಚ್‌ಒ) ಮಹಾ ನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಹೇಳಿದ್ದಾರೆ.
ಸುಡಾನ್‌ನ ಉತ್ತರ ಡಾರ್ಫುರ್ ಪ್ರದೇಶದಲ್ಲಿ ಆಸ್ಪತ್ರೆಯ ಮೇಲೆ ನಡೆದ ಡ್ರೋನ್ ದಾಳಿಯಲ್ಲಿ 70ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, ಹಲವರು ತೀವ್ರವಾಗಿ ಗಾಯಗೊಂಡಿದ್ದರು.
ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಘೆಬ್ರೆಯೆಸಸ್, 'ಎಲ್- ಫಷರ್‌ನಲ್ಲಿರುವ ಏಕೈಕ ಸುಸಜ್ಜಿತ ಆಸ್ಪತ್ರೆಯಾಗಿರುವ 'ಸೌದಿ ಟೀಚಿಂಗ್ ಮೆಟರನಲ್' ಆಸ್ಪತ್ರೆಯು ಪ್ರಸೂತಿ, ಶಸ್ತ್ರಚಿಕಿತ್ಸೆ, ಮಕ್ಕಳ ಚಿಕಿತ್ಸೆ ಸೇರಿದಂತೆ ಹಲವು ಸೇವೆಗಳನ್ನು ಒದಗಿಸುತ್ತಿದೆ. ಆಸ್ಪತ್ರೆಗಳ ಮೇಲಿನ ದಾಳಿಯನ್ನು ನಿಲ್ಲಿಸುವಂತೆ ಮತ್ತು ಹಾನಿಗೊಳಗಾದ ಸೌಲಭ್ಯಗಳನ್ನು ಮರುಸ್ಥಾಪಿಸುವಂತೆ ಒತ್ತಾಯಿಸುತ್ತಿದ್ದೇವೆ' ಎಂದು ಹೇಳಿದ್ದಾರೆ.
ಸುಡಾನ್ ಸೇನೆ ಮತ್ತು ರ್‍ಯಾಪಿಡ್ ಸಪೋರ್ಟ್ ಫೋರ್ಸ್‌ಸ್(ಆರ್‌ಎಸ್‌ಎಫ್) ಸಂಘಟನೆ ನಡುವೆ 2023ರಿಂದ ಕಾಳಗ ನಡೆಯುತ್ತಿದ್ದು, ಸುಮಾರು10 ಸಾವಿರ ಜನರ ಸಾವಿಗೆ ಕಾರಣವಾಗಿದೆ. ಮಿಲಿಯನ್‌ಗಟ್ಟಲೇ ಜನರು ಮನೆ ತೊರೆದಿದ್ದು, ಜನಸಂಖ್ಯೆ ಅರ್ಧದಷ್ಟು ಜನರನ್ನು ಹಸಿವಿಗೆ ದೂಡಿದೆ.
'ಆರ್‌ಎಸ್‌ಎಫ್‌ನ ಡ್ರೋನ್ ಆಸ್ಪತ್ರೆಯ ತೀವ್ರ ನಿಗಾ ಘಟಕದ ಮೇಲೆ ಬಿದ್ದಿದ್ದು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 70 ಜನರ ಸಾವಿಗೆ ಕಾರಣವಾಗಿದೆ' ಎಂದು ಡಾರ್ಫುರ್ ಗವರ್ನರ್ ಮಿನಿ ಮಿನ್ನಾವಿ ತಿಳಿಸಿದ್ದಾರೆ.