ದಾವೋಸ್: 'ಉತ್ಪಾದನೆ, ಸೇವೆಗಳು ಹಾಗೂ ಕಾನೂನುಗಳ ಸರಳೀಕರಣದ ಜೊತೆಗೆ ಎಲ್ಲರನ್ನು ಒಳಗೊಳ್ಳುವ ಅಭಿವೃದ್ಧಿಯೇ ಭಾರತದ ಆರ್ಥಿಕತೆಯ ಮೂಲಾಧಾರ' ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಗುರುವಾರ ಹೇಳಿದ್ದಾರೆ.
ಇಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆಯ ವಾರ್ಷಿಕ ಸಮಾವೇಶದಲ್ಲಿ ಗೋಷ್ಠಿಯೊಂದರಲ್ಲಿ ಮಾತನಾಡಿದ ಅವರು, 'ಎಲ್ಲರನ್ನು ಒಳಗೊಳ್ಳುವ ಪ್ರಗತಿಯೇ ಪ್ರಧಾನಿ ನರೇಂದ್ರ ಮೋದಿ ಅವರು ಮೂರನೇ ಅವಧಿಗೆ ಆಯ್ಕೆಯಾಗಲು ಪ್ರಮುಖ ಕಾರಣ' ಎಂದು ಹೇಳಿದ್ದಾರೆ.
ಭಾರತವು ಬರುವ ದಿನಗಳಲ್ಲಿ ಹಣದುಬ್ಬರವನ್ನು ನಿಯಂತ್ರಣದಲ್ಲಿ ಇಡುವ ಜೊತೆಗೆ ಆರ್ಥಿಕ ಪ್ರಗತಿ ದರವನ್ನು ಶೇ 6-8ರಷ್ಟು ನಿರ್ವಹಣೆ ಮಾಡಲಿದೆ' ಎಂದೂ ಅವರು ವಿಶ್ವಾಸ ವ್ಯಕ್ತಪಡಿಸಿದರು.
'ಯಾವುದೇ ಕ್ಷೇತ್ರ ತೆಗೆದುಕೊಂಡರೂ ಭಾರತದಲ್ಲಿ ಪ್ರತಿಭೆಗಳಿಗೆ ಕೊರತೆ ಇಲ್ಲ. ಇನ್ನೊಂದೆಡೆ ಉದ್ಯಮಸ್ನೇಹಿ ನೀತಿಗಳನ್ನು ಹೊಂದಿದೆ. ಇದೇ ಕಾರಣಕ್ಕೆ, ಇಡೀ ವಿಶ್ವದ ಪಾಲಿಗೆ ಭಾರತ ನಂಬಿಕಸ್ಥ ದೇಶವೆನಿಸಿದ್ದು, ಅನೇಕ ಕಂಪನಿಗಳು ತಮ್ಮ ಕಾರ್ಖಾನೆಗಳನ್ನು ಭಾರತಕ್ಕೆ ಸ್ಥಳಾಂತರ ಮಾಡುತ್ತಿವೆ' ಎಂದರು.
ಭಾರತದ ಸುವರ್ಣಯುಗ ಆರಂಭವಾಗಿದೆ: ನಾಯ್ಡು
'ಭಾರತದ ಸುವರ್ಣಯುಗ ಆರಂಭವಾಗಿದೆ. ಅಭಿವೃದ್ಧಿ ವಿಚಾರವಾಗಿ ದೇಶದ ಎಲ್ಲ ರಾಜ್ಯಗಳ ನಡುವೆ ಸ್ಪರ್ಧೆ ಇದೆ ಎಲ್ಲವೂ ಪರಸ್ಪರ ಪೂರಕವಾಗಿ ಕೆಲಸ ಮಾಡುತ್ತಿವೆ' ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಹೇಳಿದರು. ಭಾರತದ ನಿಯೋಗದೊಂದಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು '1967ರಿಂದಲೂ ನಾನು ವಿಶ್ವ ಆರ್ಥಿಕ ವೇದಿಕೆ ಸಮಾವೇಶದಲ್ಲಿ ಪಾಲ್ಗೊಳ್ಳುತ್ತಾ ಬಂದಿದ್ದೇನೆ. ಇದೇ ಮೊದಲ ಬಾರಿಗೆ ಭಾರತ ಒಂದು ತಂಡವಾಗಿ ವಿಶ್ವದೆದುರು ತನ್ನನ್ನು ಪ್ರಸ್ತುತಪಡಿಸುತ್ತಿದೆ' ಎಂದರು. 'ಎಲ್ಲ ರಾಜ್ಯಗಳು ಒಟ್ಟಿಗೆ ಅಭಿವೃದ್ಧಿ ಹೊಂದುವುದು ಮುಖ್ಯ. ಭಾರತದಲ್ಲಿ ಈಗ ಈ ಕಾರ್ಯ ನಡೆಯುತ್ತಿದೆ' ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಹೇಳಿದರು.