ನವದೆಹಲಿ: ಕೇಂದ್ರ ಸರ್ಕಾರವು ನ್ಯಾಯಾಲಯಗಳಲ್ಲಿನ ಮೊಕದ್ದಮೆಗಳನ್ನು ಎದುರಿಸಲು ಕಳೆದ 10 ವರ್ಷಗಳಲ್ಲಿ ₹409 ಕೋಟಿ ಖರ್ಚು ಮಾಡಿರುವುದಾಗಿ ತಿಳಿಸಿದೆ.
ಬಜೆಟ್ ಅಧಿವೇಶನದ ವೇಳೆ ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ನೀಡಿರುವ ಉತ್ತರದಲ್ಲಿ ಸರ್ಕಾರವು ಈ ಮಾಹಿತಿ ನೀಡಿದೆ.
ನ್ಯಾಯಾಲಯಗಳಲ್ಲಿ ದಾಖಲಾಗಿರುವ ಪ್ರಕರಣಗಳನ್ನು ಎದುರಿಸಲು 2023-24ನೇ ಹಣಕಾಸು ವರ್ಷದಲ್ಲಿ ಸರ್ಕಾರ ₹66 ಕೋಟಿ ಖರ್ಚು ಮಾಡಿದೆ. ಇದು 2022-23ರಲ್ಲಿ ಮಾಡಿದ ಖರ್ಚಿಗಿಂತ ₹9 ಕೋಟಿ ಅಧಿಕವಾಗಿದೆ.
ಕೋವಿಡ್-19 ಸಾಂಕ್ರಾಮಿಕ ಸಂದರ್ಭದಲ್ಲಿನ ಎರಡು ವರ್ಷಗಳನ್ನು ಹೊರತುಪಡಿಸಿ 2014-15ರಿಂದ ನ್ಯಾಯಾಲಯಗಳಲ್ಲಿನ ದಾವೆಗಳನ್ನು ಎದುರಿಸಲು ಸರ್ಕಾರ ಮಾಡುತ್ತಿರುವ ವೆಚ್ಚದ ಪ್ರಮಾಣ ಹೆಚ್ಚಾಗಿದೆ.
ಬಾಕಿ ಉಳಿದಿರುವ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಲು ಸರ್ಕಾರವು 'ರಾಷ್ಟ್ರೀಯ ದಾವೆ ನೀತಿ'ಯನ್ನು ರೂಪಿಸುತ್ತಿದೆ. ಇದರ ಅಂತಿಮ ಕರಡನ್ನು ಸಚಿವ ಸಂಪುಟದ ಮುಂದೆ ಮಂಡಿಸಲಾಗುವುದು ಎಂದು ಅದು ಹೇಳಿದೆ.