ಅಹಮದಾಬಾದ್: ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಅವರ ಪುತ್ರ ಜೀತ್ ಅದಾನಿ ಹಾಗೂ ದಿವಾ ಅವರು ಶುಕ್ರವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಕೆಲವೇ ಗಣ್ಯರ ಸಮ್ಮುಖದಲ್ಲಿ ಸರಳವಾಗಿ ವಿವಾಹ ನೆರವೇರಿದೆ.
ವಿವಾಹವನ್ನು ಸರಳವಾಗಿ ನಡೆಸುವ ಮೂಲಕ ಆರೋಗ್ಯ, ಶಿಕ್ಷಣ, ಕೌಶಲ್ಯ ಅಭಿವೃದ್ಧಿ, ಮೂಲಸೌಕರ್ಯ ಸೇರಿದಂತೆ ವಿವಿಧ ಸಾಮಾಜಿಕ ಸೇವೆಗಳಿಗಾಗಿ ಅದಾನಿ, ಬರೋಬ್ಬರಿ ರೂ. 10,000 ಕೋಟಿ ದೇಣಿಗೆಯಾಗಿ ನೀಡಿದ್ದಾರೆ ಎಂದು ವರದಿಯಾಗಿದೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ನವ ಜೋಡಿಯ ಫೋಟೋ ಹಂಚಿಕೊಂಡಿರುವ ಗೌತಮ್ ಅದಾನಿ, ದೇವರ ಆಶೀರ್ವಾದದೊಂದಿಗೆ ಜೀತ್ ಹಾಗೂ ದಿವಾ ಇಂದು ವಿವಾಹ ಬಂಧನಕ್ಕೆ ಒಳಗಾದರು ಎಂದು ತಿಳಿಸಿದ್ದಾರೆ.
ಅಹಮದಾದ್ ನಲ್ಲಿ ಸಾಂಪ್ರದಾಯಿಕ ವಿಧಿವಿಧಾನ ಹಾಗೂ ಶುಭ ಹಾರೈಕೆಗಳೊಂದಿಗೆ ಮದುವೆ ಕಾರ್ಯಕ್ರಮ ನೆರವೇರಿತು. ಇದು ಖಾಸಗಿ ಸಮಾರಂಭ ಆಗಿದ್ದರಿಂದ ಎಲ್ಲ ಹಿತೈಷಿಗಳನ್ನು ಆಹ್ವಾನಿಸಲು ಸಾಧ್ಯವಾಗಲಿಲ್ಲ. ಅದಕ್ಕಾಗಿ ಕ್ಷಮೆಯಾಚಿಸುತ್ತೇನೆ. ಜೀತ್- ದೀವಾ ಜೋಡಿಗೆ ನಿಮ್ಮೆಲ್ಲರ ಪ್ರೀತಿ ಮತ್ತು ಅಶೀರ್ವಾದ ಇರಲಿ ಎಂದು ಹೇಳಿದ್ದಾರೆ.