ಹೈದರಾಬಾದ್: ತೆಲಂಗಾಣದ ಶ್ರೀಶೈಲಂ ಎಡದಂಡ ಕಾಲುವೆಯ ಸುರಂಗ ಕುಸಿದಿರುವ ಸ್ಥಳದಲ್ಲಿ ಸತತ 5ನೇ ದಿನವೂ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.
ಸುರಂಗದಲ್ಲಿ ಸಿಲುಕಿರುವ 8 ಮಂದಿ ಬದುಕಿರುವ ಸಾಧ್ಯತೆ ಕ್ಷೀಣವಾಗಿದೆ.ಕಾರ್ಮಿಕರು ಸಿಲುಕಿರುವ ಸ್ಥಳಕ್ಕೆ ತೆರಳಲು 10 ಅಡಿ ಎತ್ತರ ಮತ್ತು 10,000 ಘನ ಮೀಟರ್ ಆವೃತ್ತವಾಗಿರುವ ಕೆಸರನ್ನು ಹೊರತೆಗೆಯುವ ಸವಾಲಿನ ಮತ್ತು ಅಪಾಯಕಾರಿ ಕೆಲಸಕ್ಕೆ ರಕ್ಷಣಾ ತಂಡ ಕೈಹಾಕಿದೆ.
ಸುರಂಗದ ಒಳಗೆ ತಿರುವು ತೆಗೆದುಕೊಳ್ಳಲು ಸ್ಥಳಾವಕಾಶವಿಲ್ಲದೆ ಲಾರಿಗಳು ಒಳಗೆ ಹೋಗಿ ಕೆಸರು ಸಾಗಿಸಲು ಕಷ್ಟಕರವಾಗಿದೆ. ಸುರಂಗದ ಒಳಗಿದ್ದ ಟನಲ್ ಬೋರಿಂಗ್ ಮೆಷಿನ್ (ಟಿಬಿಎಂ)ಗೆ ಅಳವಡಿಸಲಾಗಿದ್ದ ಕನ್ವೇಯರ್ ಬೆಲ್ಟ್ ಹಾಳಾಗಿದ್ದು, ಬೆಲ್ಟ್ ಮೂಲಕ ಮಣ್ಣು ಸಾಗಿಸುವ ಆಯ್ಕೆ ಕೈ ತಪ್ಪಿದೆ.
ತೀವ್ರವಾಗಿ ಹಾನಿಗೊಳಗಾಗಿರುವ ಟಿಬಿಎಂ, ರಕ್ಷಣಾ ಕಾರ್ಯಾಚರಣೆಯ ತಂಡ ಅಂತಿಮ ಹಂತಕ್ಕೆ ಹೋಗುವ ಮಾರ್ಗಕ್ಕೆ ಅಡ್ಡಲಾಗಿದೆ. ಸುರಂಗದ ಮೂಲಕ ಕುಸಿದ ಪ್ರದೇಶವನ್ನು ತಲುಪುವಾಗ, ಮಣ್ಣು ಮತ್ತು ಕಾಂಕ್ರೀಟ್ ಅವಶೇಷಗಳನ್ನು ದಾಟುವುದು ಒಂದು ಸವಾಲಾಗಿದೆ. ಅಂತಿಮ ಹಂತದ100 ಮೀಟರ್ ಮಂ್ಂನ್ನು ತೆರವು ಮಾಡಿ ಸಂತ್ರಸ್ತರನ್ನು ಹುಡುಕುವುದು ಮತ್ತೊಂದು ಸವಾಲಾಗಿದೆ.
ಆರಂಭದ ಯೋಜನೆಯು ಕೆಸರು ತೆಗೆಯಲು ಸುರಂಗದೊಳಗೆ ಜೆಸಿಬಿ ಕಳುಹಿಸುವುದನ್ನು ಒಳಗೊಂಡಿತ್ತು. ಆದರೆ, ಯಂತ್ರವು 360 ಡಿಗ್ರಿ ವಿಧಾನದಲ್ಲಿ ಹೇಗೆ ಕಾರ್ಯಾಚರಿಸುತ್ತದೆ ಎಂಬ ಪ್ರಶ್ನೆ ಮೂಡಿತು. ಈಗಾಗಲೇ ಆ ಪ್ರದೇಶದಲ್ಲಿ ಗಣನೀಯ ಪ್ರಮಾಣದಲ್ಲಿ ನೀರು ಹರಿದಿದ್ದು, ಯಂತ್ರದ ಮೂಲಕ ಚಲಿಸಲು ಸಾಧ್ಯವಾಗುತ್ತಿಲ್ಲ. ಹೂಳು ತೆರವು ಆರಂಭಿಸಿದರೆ ಮೇಲ್ಬದಿಯ ಮಣ್ಣು ಮತ್ತಷ್ಟು ಕುಸಿಯುವ ಅಪಾಯವಿದ್ದು, ದೊಡ್ಡ ಅನಾಹುತಕ್ಕೆ ಕಾರಣವಾಗಬಹುದು. ಮೇಲ್ಭಾಗವು ಭಾರವಾದ ಟಿಬಿಎಂ ಕಾಂಕ್ರೀಟ್ ಅವಶೇಷಗಳು ಮತ್ತು ಕಬ್ಬಿಣದ ಭಾಗಗಳಿಂದ ತುಂಬಿದೆ. ಸರಿಸುಮಾರು 10,000 ಘನ ಮೀಟರ್‌ಗಳಷ್ಟು ಮಣ್ಣನ್ನು ಹೊರತರಬೇಕಿದೆ. ಪ್ರತಿ ಟ್ರಕ್‌ನಲ್ಲಿ ಕೇವಲ 5 ಘನ ಮೀಟರ್‌ಗಳನ್ನು ಮಣ್ಣು ಮಾತ್ರ ಸಾಗಿಸಬಹುದಾಗಿರುವುದರಿಂದ ಈ ಕಾರ್ಯಾಚರಣೆ ಊಹಿಸಲೂ ಅಸಾಧ್ಯವಾದಷ್ಟು ಕಠಿಣವಾಗಿದೆ ಎಂದು ತೆಲಂಗಾಣ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.