ಢಾಕಾ/ ನವದೆಹಲಿ: ಬಾಂಗ್ಲಾದೇಶದಲ್ಲಿ ವಿಧ್ವಂಸಕ ಕೃತ್ಯಗಳಲ್ಲಿ ಭಾಗಿಯಾಗಿರುವವರ ವಿರುದ್ಧ ಸರ್ಕಾರ ಕೈಗೊಂಡಿರುವ 'ಆಪರೇಷನ್ ಡೆವಿಲ್ ಹಂಟ್' ಕಾರ್ಯಾಚರಣೆಯಲ್ಲಿ 1308 ಮಂದಿಯನ್ನು ಬಂಧಿಸಲಾಗಿದೆ.
ಕಳೆದ ನಾಲ್ಕು ದಿನಗಳಿಂದ ವಿಧ್ವಂಸಕ ಕೃತ್ಯಗಳು ನಡೆಯುತ್ತಿರುವ ಸಂದರ್ಭದಲ್ಲಿ ಈ ಕಾರ್ಯಾಚರಣೆ ಕೈಗೊಳ್ಳಲಾಗಿದೆ.
ಈ ಮೂಲಕ ವಿಧ್ವಂಸಕ ಕೃತ್ಯದಲ್ಲಿ ಭಾಗಿಯಾಗಿರುವ ಎಲ್ಲರನ್ನೂ ವಶಕ್ಕೆ ಪಡೆಯಲು ಮಧ್ಯಂತರ ಸರ್ಕಾರ ಮುಂದಾಗಿದೆ.
ಶನಿವಾರ ರಾಜಧಾನಿ ಢಾಕಾದ ಹೊರವಲಯದಲ್ಲಿರುವ ಅವಾಮಿ ಲೀಗ್ ಮುಖಂಡರೊಬ್ಬರ ಮನೆಯ ಧ್ವಂಸ ಮಾಡುವ ಸಂದರ್ಭದಲ್ಲಿ ವಿದ್ಯಾರ್ಥಿಗಳು ಗಾಯಗೊಂಡಿದ್ದರು. ಇದಾದ ನಂತರ ಮುಖ್ಯ ಸಲಹೆಗಾರ ಮೊಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರವು 'ಆಪರೇಷನ್ ಡೆವಿಲ್ ಹಂಟ್' ಕಾರ್ಯಾಚರಣೆಗೆ ಆದೇಶಿಸಿತ್ತು.
'ಆಪರೇಷನ್ ಡೆವಿಲ್ ಹಂಟ್' ಕಾರ್ಯಾಚರಣೆ ಆರಂಭವಾದ 24 ಗಂಟೆಗಳಲ್ಲಿ ಮೆಟ್ರೊಪಾಲಿಟನ್ ನಗರಗಳು ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ 274 ಮಂದಿಯನ್ನು ಬಂಧಿಸಲಾಗಿದೆ ಎಂದು 'ಡೇಲಿ ಸ್ಟಾರ್' ಎಂಬ ಮಾಧ್ಯಮ ಸಂಸ್ಥೆ ಭಾನುವಾರ ವರದಿ ಮಾಡಿತ್ತು. 'ಆಪರೇಷನ್ ಡೆವಿಲ್ ಹಂಟ್' ಸೇನಾ ಪಡೆಗಳು, ಪೊಲೀಸರು ಮತ್ತು ತಜ್ಞರ ಘಟಕಗಳನ್ನು ಒಳಗೊಂಡಿರುವ ಜಂಟಿ ಕಾರ್ಯಾಚರಣೆ ಪಡೆಗಳನ್ನು ಒಳಗೊಂಡಿದೆ.
ಈ ಕಾರ್ಯಾಚರಣೆಯು ದೇಶವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿರುವವರನ್ನು ಗುರಿಯಾಗಿಸಿಕೊಂಡಿದೆ ಎಂದು ಗೃಹ ವ್ಯವಹಾರಗಳ ಸಲಹೆಗಾರ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಜಹಂಗೀರ್ ಆಲಂ ಚೌಧರಿ ತಿಳಿಸಿದ್ದಾರೆ.