ತಿರುವನಂತಪುರಂ: ಸಾಹಸ ಕಿರಣಂ ಯೋಜನೆಯ ಅನುಷ್ಠಾನಕ್ಕಾಗಿ 10 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲು ಆದೇಶ ಹೊರಡಿಸಲಾಗಿದೆ ಎಂದು ಉನ್ನತ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸಚಿವ ಡಾ. ಆರ್.ಬಿಂದು ಹೇಳಿರುವರು. ಈ ಮೊತ್ತವನ್ನು ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲು ತುರ್ತು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಸಚಿವರು ಹೇಳಿದರು.
ಸಾಹಸ ಕಿರಣಂ ಎಂಬುದು ಹಾಸಿಗೆ ಹಿಡಿದ ರೋಗಿಗಳನ್ನು ನೋಡಿಕೊಳ್ಳುವವರಿಗೆ, ಮಾನಸಿಕ ಮತ್ತು ದೈಹಿಕ ಸವಾಲುಗಳನ್ನು ಎದುರಿಸುತ್ತಿರುವವರಿಗೆ ಮತ್ತು ಪೂರ್ಣ ಸಮಯದ ಆರೈಕೆದಾರರ ಸೇವೆಯ ಅಗತ್ಯವಿರುವ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಸರ್ಕಾರವು ಒದಗಿಸುವ ಮಾಸಿಕ ಆರ್ಥಿಕ ಸಹಾಯ ಯೋಜನೆಯಾಗಿದೆ.
ಯೋಜನೆಯ ಅನುಷ್ಠಾನಕ್ಕಾಗಿ 2024-25ರ ಆರ್ಥಿಕ ವರ್ಷದ ಬಜೆಟ್ ಹಂಚಿಕೆಯಿಂದ ಮೊದಲ ಕಂತಿನ 10 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಎರಡನೇ ಕಂತಿನಲ್ಲಿ ಇನ್ನೂ 10 ಕೋಟಿ ರೂ. ಬಿಡುಗಡೆ ಮಾಡಲು ಅನುಮೋದನೆ ನೀಡಲಾಗಿದೆ ಎಂದು ಸಚಿವೆ ಡಾ. ಆರ್.ಬಿಂದು ಮಾಹಿತಿ ನೀಡಿರುವರು.