ವಾಷಿಂಗ್ಟನ್ (ರಾಯಿಟರ್ಸ್): ಅಮೆರಿಕದ ಡೊನಾಲ್ಡ್ ಟ್ರಂಪ್ ನೇತೃತ್ವದ ಸರ್ಕಾರ ವಿವಿಧ ಇಲಾಖೆಗಳ 9,500ಕ್ಕೂ ಅಧಿಕ ನೌಕರರನ್ನು ಶುಕ್ರವಾರ ವಜಾಗೊಳಿಸಿದೆ. ಚುನಾವಣಾ ಪ್ರಚಾರದಲ್ಲಿಯೂ ಟ್ರಂಪ್ ಈ ತೀರ್ಮಾನ ಪ್ರಕಟಿಸಿದ್ದರು.
ಆಂತರಿಕ ಸಚಿವಾಲಯ, ಇಂಧನ, ನಿವೃತ್ತ ಸೈನಿಕರ ಇಲಾಖೆ, ಕೃಷಿ, ಆರೋಗ್ಯ, ಮಾನವ ಸಂಪನ್ಮೂಲ ಇಲಾಖೆಗಳಲ್ಲಿಯೇ ದೊಡ್ಡ ಪ್ರಮಾಣದಲ್ಲಿ ನೌಕರರನ್ನು ತೆಗೆದು ಹಾಕಲಾಗಿದೆ.
ಇದಲ್ಲದೇ, ಹೆಚ್ಚುವರಿಯಾಗಿ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕೆಲಸ ಮಾಡುತ್ತಿರುವ 75 ಸಾವಿರ ಉದ್ಯೋಗಿಗಳು ಸ್ವಯಂಪ್ರೇರಿತರಾಗಿ ಕೆಲಸ ಬಿಡುವ ಇಚ್ಛೆ ವ್ಯಕ್ತಪಡಿಸಿದ್ದಾರೆ ಎಂದು ಪ್ರಮುಖ ಮಾಧ್ಯಮ ಸಂಸ್ಥೆಗಳು ವರದಿ ಮಾಡಿದೆ.
ಅಮೆರಿಕದ ಸರ್ಕಾರದ ಅಡಿಯಲ್ಲಿ 23 ಲಕ್ಷ ಮಂದಿ ಕೆಲಸ ಮಾಡುತ್ತಿದ್ದು, ಇದರಲ್ಲಿ ಶೇ 3 ರಷ್ಟು ಮಂದಿಯನ್ನು ಕೆಲಸದಿಂದ ತೆಗೆದುಹಾಕಲು ತೀರ್ಮಾನಿಸಲಾಗಿದೆ.
ಏಕೆ ನಿರ್ಧಾರ: ಅಮೆರಿಕ ಸರ್ಕಾರವು 36 ಟ್ರಿಲಿಯನ್ ಡಾಲರ್‌ನಷ್ಟು ಸಾಲ ಹೊಂದಿದ್ದು, ಕಳೆದ ವರ್ಷ 1.8 ಟ್ರಿಲಿಯನ್ ಡಾಲರ್‌ನಷ್ಟು ಕೊರತೆ ಎದುರಿಸುತ್ತಿತ್ತು. ಸುಧಾರಣೆ ತರುವ ನಿಟ್ಟಿನ ಭಾಗವಾಗಿ ಸರ್ಕಾರದ ಈ ನಿರ್ಧಾರ ಕೈಗೊಂಡಿದೆ ಎಂದು ಹೇಳಲಾಗಿದೆ.
ಉದ್ಯೋಗ ಕಡಿತದ ಜೊತೆಗೆ ವಿದೇಶಗಳಿಗೆ ಕೊಡುವ ನೆರವಿನ ಪ್ರಮಾಣದಲ್ಲಿಯೂ ಟ್ರಂಪ್ ಈಗಾಗಲೇ ಕಡಿತಗೊಳಿಸಿದ್ದಾರೆ. ಅಮೆರಿಕ ಸರ್ಕಾರದ ಅಧೀನದಲ್ಲಿದ್ದ ಅಂತರರಾಷ್ಟ್ರೀಯ ಅಭಿವೃದ್ಧಿ ಕೇಂದ್ರ ಹಾಗೂ ಗ್ರಾಹಕರ ಹಣಕಾಸು ರಕ್ಷಣಾ ಇಲಾಖೆಯನ್ನು ಸಂಪೂರ್ಣವಾಗಿ ಮುಚ್ಚಿದ್ದಾರೆ.