ರಾಂಚಿ: ಜಾರ್ಖಂಡ್‌ನ 10ನೇ ತರಗತಿ ಬೋರ್ಡ್ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಂಗಳವಾರ ಮತ್ತೆ ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದು, ಬಂಧಿತರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ.
'ಕೊಡೆರ್ಮಾ ಪೊಲೀಸರು ಇಡೀ ಪ್ರಕರಣವನ್ನು ಬೇಧಿಸಿದ್ದು, ಒಟ್ಟು 10 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಪ್ರಕರಣದ ಸೂತ್ರಧಾರ ವಿದ್ಯಾರ್ಥಿಯಾಗಿದ್ದು, ಕಾರ್ಮಿಕನಾಗಿಯೂ ಕೆಲಸ ಮಾಡುತ್ತಿದ್ದ' ಎಂದು ಡಿಜಿಪಿ ಅನುರಾಗ್ ಗುಪ್ತಾ ತಿಳಿಸಿದರು.
'ಆರು ಮಂದಿ ಆರೋಪಿಗಳನ್ನು ಗಿರಿದಿಹ್ ಜಿಲ್ಲೆಯಲ್ಲಿ ಕೊಡೆರ್ಮಾ ಪೊಲೀಸರು ಬಂಧಿಸಿದರು' ಎಂದರು.
ಫೆ. 20ರಂದು ನಿಗದಿಯಾಗಿದ್ದ 10ನೇ ತರಗತಿಯ ಹಿಂದಿ ಹಾಗೂ ವಿಜ್ಞಾನ ವಿಷಯದ ಪತ್ರಿಕೆಗಳು ಸಾಮಾಜಿಕ ಜಾಲತಾಣದಲ್ಲಿ ಸೋರಿಕೆಯಾಗಿದ್ದರಿಂದ ಜಾರ್ಖಂಡ್‌ನ ಶೈಕ್ಷಣಿಕ ಮಂಡಳಿಯು ಪರೀಕ್ಷೆಯನ್ನು ರದ್ದುಗೊಳಿಸಿತ್ತು.