ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ 2021ರಲ್ಲಿ ನಡೆದಿದ್ದ ಜಗ್ಗದಲ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿದ್ದ ಇಬ್ಬರು ಅಪರಾಧಿಗಳಿಗೆ ಕೋಲ್ಕತ್ತ ಎನ್‌ಐಎ ವಿಶೇಷ ನ್ಯಾಯಾಲಯವು 10 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ.
ಪ್ರಕರಣದಲ್ಲಿ ಭಾಗಿಯಾಗಿದ್ದ ಚಂದ್ ಅಲಿಯಾಸ್ ಆರಿಫ್ ಅಖ್ತರ್ ಮತ್ತು ರಾಹುಲ್ ಪಾಸಿ ಎಂಬುವವರಿಗೆ ನ್ಯಾಯಾಲಯವು 10 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ₹5,000 ದಂಡ ವಿಧಿಸಿದೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತಿಳಿಸಿದೆ.
2021ರ ಸೆಪ್ಟೆಂಬರ್ 8ರಂದು ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಜಗ್ಗದಲ್‌ನಲ್ಲಿರುವ ಮಾಜಿ ಸಂಸದ ಅರ್ಜುನ್ ಸಿಂಗ್ ಅವರ ಕಚೇರಿ ಮತ್ತು ನಿವಾಸ ಮಜ್ದೂರ್ ಭವನದ ಬಳಿ ಬಾಂಬ್ ಸ್ಫೋಟ ನಡೆಸಲಾಗಿತ್ತು ಎಂದು ತನಿಖಾ ಸಂಸ್ಥೆ ಹೇಳಿದೆ.
ಘಟನೆ ಕುರಿತು ತನಿಖೆ ನಡೆಸಿದ್ದ ಸ್ಥಳೀಯ ಪೊಲೀಸರು ಅಖ್ತರ್ ಮತ್ತು ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನನ್ನು ಬಂಧಿಸಿದ್ದರು. ಬಳಿಕ 2021 ಸೆಪ್ಟೆಂಬರ್ 14ರಂದು ಪ್ರಕರಣದ ತನಿಖೆ ವಹಿಸಿಕೊಂಡ ಎನ್‌ಐಎ ರಾಹುಲ್ ಪಾಸಿಯನ್ನು ಬಂಧಿಸಿತು. 2021ರ ಡಿಸೆಂಬರ್‌ನಲ್ಲಿ ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಶನಿವಾರ ಎನ್‌ಐಎ ವಿಶೇಷ ನ್ಯಾಯಾಲಯವು ಪಾಸಿ ಮತ್ತು ಅಖ್ತರ್ ಅವರನ್ನು ತಪ್ಪಿತಸ್ಥರೆಂದು ಘೋಷಿಸಿ ಶಿಕ್ಷೆ ವಿಧಿಸಿದೆ. ಬಾಲಕ ಇನ್ನೂ ಪೋಷಕರ ಸುಪರ್ದಿಯಲ್ಲಿದ್ದಾನೆ ಎಂದು ಎನ್‌ಐಎ ಹೇಳಿಕೆಯಲ್ಲಿ ತಿಳಿಸಿದೆ.