ನವದೆಹಲಿ: ಸ್ಥೂಲಕಾಯ ಸಮಸ್ಯೆ ಕುರಿತು ಜಾಗೃತಿ ಮೂಡಿಸಲು ದೇಶದ ವಿವಿಧ ಕ್ಷೇತ್ರಗಳ 10 ಖ್ಯಾತನಾಮರನ್ನು ಪ್ರಧಾನಿ ನರೇಂದ್ರ ಮೋದಿ ಅವರು ನಾಮನಿರ್ದೇಶನ ಮಾಡಿದ್ದಾರೆ.
'ನಾನು ನಿನ್ನೆ (ಭಾನುವಾರ) 'ಮನದ ಮಾತು' ರೇಡಿಯೊ ಕಾರ್ಯಕ್ರಮದಲ್ಲಿ ಹೇಳಿದಂತೆ... ಸ್ಥೂಲಕಾಯ ಸಮಸ್ಯೆಯ ವಿರುದ್ಧದ ಹೋರಾಟವನ್ನು ಬಲಪಡಿಸಲು ಮತ್ತು ಅಡುಗೆ ಎಣ್ಣೆ ಬಳಕೆ ಕಡಿತ ಮಾಡುವ ಕುರಿತು ಜಾಗೃತಿ ಮೂಡಿಸಲು ಈ ಕೆಳಗಿನ ಜನರನ್ನು ನಾಮನಿರ್ದೇಶನ ಮಾಡಲು ನಾನು ಬಯಸುತ್ತೇನೆ' ಎಂದು ಮೋದಿ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
ಮೋದಿ ಅವರು ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ಖ್ಯಾತ ಉದ್ಯಮಿ ಆನಂದ್ ಮಹೀಂದ್ರ, ಅಂತರರಾಷ್ಟ್ರೀಯ ಶೂಟರ್ ಮನು ಭಾಕರ್, ವೇಟ್‌ಲಿಫ್ಟರ್ ಮಿರಾಬಾಯಿ ಚಾನು, ನಟರಾದ ಮೋಹನ್ ಲಾಲ್, ಮಾಧವನ್, ಇನ್ಫೋಸಿಸ್ ಸಹ ಸಂಸ್ಥಾಪಕ ನಂದನ್ ನಿಲೇಕಣಿ, ಬಾಲಿವುಡ್‌ನ ಜನಪ್ರಿಯ ಗಾಯಕಿ ಶ್ರೇಯಾ ಘೋಷಾಲ್, ರಾಜ್ಯಸಭಾ ಸದಸ್ಯೆ ಸುಧಾ ಮೂರ್ತಿ ಹಾಗೂ ಲೋಕಸಭಾ ಸಂಸದ ನಿರಾಹುವಾ ಹಿಂದೂಸ್ತಾನಿ ಅವರಿಗೆ ಸವಾಲು ನೀಡಿದ್ದಾರೆ.
ಜಗತ್ತಿನಾದ್ಯಂತ ಜನರಲ್ಲಿ ಹೆಚ್ಚುತ್ತಿರುವ ಸ್ಥೂಲಕಾಯ ಸಮಸ್ಯೆಯ ಕುರಿತು ಜಾಗೃತಿ ಮೂಡಿಸಲು ಮತ್ತು ಅಡುಗೆ ಎಣ್ಣೆ ಬಳಕೆಯಲ್ಲಿ ಪ್ರತಿ ತಿಂಗಳು ಶೇ 10ರಷ್ಟು ಕಡಿತ ಮಾಡುತ್ತೇನೆ ಎಂದು ನಿರ್ಧರಿಸಿ. ಸಾಮಾನ್ಯವಾಗಿ ನೀವು ಪ್ರತಿ ತಿಂಗಳು ಎಷ್ಟು ಅಡುಗೆ ಎಣ್ಣೆ ಖರೀದಿ ಮಾಡುತ್ತಾ ಬಂದಿದ್ದೀರೊ ಅದರಲ್ಲಿ ಶೇ 10ರಷ್ಟು ಕಡಿಮೆ ಪ್ರಮಾಣದಲ್ಲಿ ಈಗ ಅಡುಗೆ ಎಣ್ಣೆ ಖರೀದಿಸಿ ಎಂದು ಮೋದಿ ಭಾನುವಾರ ಕರೆ ನೀಡಿದ್ದರು.