ನಾಗರಕರ್ನೂಲ್: ಜಿಲ್ಲೆಯ ದೋಮಲಪೆಂಟ ಗ್ರಾಮದ ಬಳಿ ನಿರ್ಮಾಣ ಹಂತದ ಶ್ರೀಶೈಲಂ ಎಡದಂಡೆ ಕಾಲುವೆ (ಎಸ್‌ಎಲ್‌ಬಿಸಿ) ಕುಸಿದು, ಸಿಲುಕಿರುವ ಸಿಬ್ಬಂದಿ ರಕ್ಷಣಾ ಕಾರ್ಯ ಮತ್ತಷ್ಟು ಸವಾಲಿನದಾಗಿ ಪರಿಣಮಿಸಿದೆ.
ಈಗ, ರಕ್ಷಣಾ ಕಾರ್ಯ ನಡೆಯುತ್ತಿರುವ ಸ್ಥಳದಿಂದ 8 ಜನ ಸಿಬ್ಬಂದಿ ಸಿಲುಕಿದ್ದಾರೆ ಎಂದು ಶಂಕಿಸಲಾದ ಸ್ಥಳವು 40 ಮೀಟರ್‌ನಷ್ಟು ದೂರ ಇದೆ.
ಆದರೆ, ಈ ಸ್ಥಳ ತಲುಪಲು 10 ಸಾವಿರ ಘನ ಮೀಟರ್‌ನಷ್ಟು ಕೆಸರು ಮಣ್ಣನ್ನು ತೆರವುಗೊಳಿಸಬೇಕಾಗಿದೆ.
ಸುಮಾರು 10 ಅಡಿಗಳಷ್ಟು ಕೆಸರಿನಿಂದ ಕೂಡಿದ ಮಣ್ಣು ಇಲ್ಲಿದ್ದು, ಇದನ್ನು ತೆರವುಗೊಳಿಸುವ ಕಾರ್ಯ ಸವಾಲಿನದು ಹಾಗೂ ಸಂಕೀರ್ಣವಾಗಿದೆ ಎಂದು ತಜ್ಞರು ಹೇಳಿದ್ದಾರೆ.
'ಟನೆಲ್ ಬೋರಿಂಗ್ ಮಷಿನ್ (ಟಿಬಿಎಂ) ಮೇಲೆ ಕಾಂಕ್ರೀಟ್ ಹಾಗೂ ಕಬ್ಬಿಣದಿಂದ ಕೂಡಿದ ಅವಶೇಷಗಳು ಬಿದ್ದಿವೆ. ಇದು, ತೆರವು ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಇನ್ನೊಂದೆಡೆ ಕೆಸರಿನಿಂದ ಕೂಡಿದ ಮಣ್ಣನ್ನು ತೆರವು ಮಾಡಿ, ಕೊನೆಯ 40 ಮೀಟರ್ ವರೆಗೆ ತೆರಳಿ, ಸಿಲುಕಿರುವವರನ್ನು ರಕ್ಷಿಸುವುದು ಸಾಧ್ಯವಿಲ್ಲ' ಎಂದು ರಕ್ಷಣಾ ಕಾರ್ಯದ ಭಾಗವಾಗಿರುವ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಕಳೆದ ಶನಿವಾರ, ಇಲ್ಲಿ ನಿರ್ಮಾಣ ಹಂತದ ಕಾಲುವೆ ಕುಸಿದಿದೆ. ಒಳಗಡೆ ಹೋಗಿ, ಮತ್ತೆ ತಿರುಗಿ ಬರುವುದಕ್ಕೆ ಅವಕಾಶವೇ ಇಲ್ಲ. ಒಳಗಡೆ ಹೋಗುವ ಟ್ರಕ್‌ಗಳು ಕೆಸರು ತುಂಬಿಕೊಂಡು ವಾಪಸ್ ಬರಲು ಸಾಧ್ಯವೇ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ಸಹ ರಕ್ಷಣಾ ಕಾರ್ಯವನ್ನು ಮತ್ತಷ್ಟು ಜಟಿಲಗೊಳಿಸಿದೆ.
ನೌಕಾಪಡೆಯ ಮರೈನ್ ಕಮಾಂಡೊಗಳನ್ನು (ಮಾರ್ಕೊಸ್) ಬುಧವಾರವೇ ರಕ್ಷಣಾ ಕಾರ್ಯಕ್ಕೆ ನಿಯೋಜನೆ ಮಾಡಲಾಗಿದೆ. ಜೆಸಿಬಿಯೊಂದನ್ನು ಒಳಗಡೆ ಕಳುಹಿಸಿ, ಮಣ್ಣು ತೆರವುಗೊಳಿಸಲು ಯೋಜಿಸಲಾಗಿತ್ತು. ಆದರ, ಯಂತ್ರವು ಮರಳಿ ಬರುವುದೇ ಸವಾಲಿನದು ಎಂಬ ಕಾರಣಕ್ಕೆ ಈ ಯೋಜನೆಯನ್ನು ಕೈಬಿಡಲಾಗಿತ್ತು.
'ಇಂತಹ ಅವಘಢಗಳು ಸಂಭವಿಸುತ್ತವೆ...'
'ಬೃಹತ್ ಎಂಜಿನಿಯರಿಂಗ್ ಪ್ರಾಜೆಕ್ಟ್‌ಗಳಡಿ ನಿರ್ಮಾಣ ಕಾರ್ಯ ಕೈಗೊಂಡ ವೇಳೆ ಇಂತಹ ಅವಘಡಗಳು ಸಂಭವಿಸುವ ಸಾಧ್ಯತೆಗಳು ಇರುತ್ತವೆ' ಎಂದು ಜೆಪಿ ಗ್ರೂಪ್‌ನ ಚೇರಮನ್ ಜೈಪ್ರಕಾಶ್ ಗೌರ್ ಹೇಳಿದ್ದಾರೆ. ಘಟನಾ ಸ್ಥಳದಲ್ಲಿ ರಸ್ತೆ ಸಚಿವ ಕೆ.ರಾಜಗೋಪಾಲ ರೆಡ್ಡಿ ಅವರನ್ನು ಭೇಟಿ ಮಾಡಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. 'ಕೆಲ ಸಂದರ್ಭಗಳಲ್ಲಿ ನಿಸರ್ಗ ಒಡ್ಡುವ ಸವಾಲುಗಳನ್ನು ಎದುರಿಸುವುದು ಕಷ್ಟ. 8 ಮಂದಿಯನ್ನು ರಕ್ಷಿಸಲು ಎಲ್ಲ ಪ್ರಯತ್ನಗಳನ್ನು ಮಾಡುತ್ತೇವೆ' ಎಂದರು. 'ಸವಾಲುಗಳಿಂದ ಕೂಡಿರುವ ಇಂತಹ ಕಾಮಗಾರಿಗಳ ವೇಳೆ ಅವಘಡಗಳು ಸಂಭವಿಸುತ್ತವೆ. ನನ್ನ ಜೀವಮಾನದಲ್ಲಿ ಇಂತಹ 6-7 ಅವಘಡಗಳನ್ನು ನೋಡಿದ್ದೇನೆ' ಎಂದೂ ಗೌರ್ ಹೇಳಿದರು.
ನ್ಯಾಯಾಂಗ ತನಿಖೆಗೆ ಬಿಆರ್‌ಎಸ್ ಆಗ್ರಹ
ಹೈದರಾಬಾದ್: ಎಸ್‌ಎಲ್‌ಬಿಸಿ ಸುರಂಗ ಅವಘಡ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕು. ಈ ಸಂಬಂಧ ಹಾಲಿ ಹೈಕೋರ್ಟ್ ನ್ಯಾಯಮೂರ್ತಿ ನೇತೃತ್ವದಲ್ಲಿ ಆಯೋಗ ರಚಿಸಬೇಕು ಎಂದು ವಿರೋಧ ಪಕ್ಷ ಬಿಆರ್‌ಎಸ್‌ನ ಕಾರ್ಯಾಧ್ಯಕ್ಷ ಕೆ.ಟಿ.ರಾಮರಾವ್ ಬುಧವಾರ ಒತ್ತಾಯಿಸಿದ್ದಾರೆ. 'ಇದು ಆಡಳಿತಾರೂಢ ಕಾಂಗ್ರೆಸ್ ಪಕ್ಷದ ನಿರ್ಲಕ್ಷ್ಯವನ್ನು ತೋರಿಸುತ್ತದೆ. ರಕ್ಷಣಾ ಕಾರ್ಯದ ಬದಲಾಗಿ ಚುನಾವಣಾ ಪ್ರಚಾರಕ್ಕೇ ಸರ್ಕಾರ ಆದ್ಯತೆ ನೀಡುತ್ತಿರುವ ಮುಖ್ಯಮಂತ್ರಿ ರೇವಂತ ರೆಡ್ಡಿ ಇದಕ್ಕೆ ಹೊಣೆ' ಎಂದು ಆರೋಪಿಸಿದ್ದಾರೆ. 'ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಕಳೆದ 14 ತಿಂಗಳಲ್ಲಿ ಮೂರು ದೊಡ್ಡ ಅವಘಡಗಳು ಸಂಭವಿಸಿವೆ. ಈ ಅವಘಡಗಳಿಂದ ಕೋಟ್ಯಂತರ ರೂಪಾಯಿ ನಷ್ಟವಾಗಿದೆ ' ಎಂದೂ ಟೀಕಿಸಿದರು.
ರಕ್ಷಣಾ ಕಾರ್ಯಕ್ಕೆ ಅಡ್ಡಿಯಾಗಿರುವ ಅಂಶಗಳು
* ಸುರಂಗದಲ್ಲಿರುವ ಟನೆಲ್ ಬೋರಿಂಗ್ ಮಷಿನ್ (ಟಿಬಿಎಂ)ಗೆ ಅಳವಡಿಸಲಾದ ಕನ್ವೆಯರ್ ಬೆಲ್ಟ್ ಭಾರಿ ಪ್ರಮಾಣದಲ್ಲಿ ಹಾನಿಗೆ ಒಳಗಾಗಿದೆ. ಹೀಗಾಗಿ ಕೆಸರು ಮಿಶ್ರಿತ ಮಣ್ಣನ್ನು ಕನ್ವೆಯರ್ ಬೆಲ್ಟ್ ಮೂಲಕ ಸಾಗಿಸುವ ಆಯ್ಕೆಯೂ ಈಗ ಇಲ್ಲದಂತಾಗಿದೆ
* ಟಿಬಿಎಂಗೆ ಹಾನಿಯಾಗಿದೆ. ಕಾರ್ಮಿಕರು ಸಿಲುಕಿರುವ ಸ್ಥಳವನ್ನು ರಕ್ಷಣಾ ಸಿಬ್ಬಂದಿ ತಲುಪಲು ಇದ್ದ ದಾರಿಗೆ ಟಿಬಿಎಂ ಅಡ್ಡಿಯಾಗಿದೆ
* 100 ಮೀಟರ್ ಉದ್ದಕ್ಕೂ ಬಿದ್ದಿರುವ ಮಣ್ಣು ತೆರವುಗೊಳಿಸಿ ಸಿಲುಕಿಕೊಂಡಿರುವ ಸಿಬ್ಬಂದಿಗಾಗಿ ಶೋಧ ನಡೆಸುವುದು ಮತ್ತೊಂದು ಸವಾಲಾಗಿದೆ
* ಕೆಸರಿನಿಂದ ಕೂಡಿದ ಮಣ್ಣನ್ನು ತೆರವುಗೊಳಿಸಲು ಆರಂಭಿಸಿದರೆ ಮೇಲ್ಮೈಯ ಮಣ್ಣನ್ನು ಮತ್ತಷ್ಟು ಕುಸಿಯುವ ಅಪಾಯವೂ ಇದೆ. ಇದು ಮತ್ತಷ್ಟು ಹಾನಿಗೆ ಕಾರಣವಾಗುತ್ತದೆ.