ತೈಪೆ : ದೇಶದ ಕಾನೂನುಬದ್ಧ ಹಕ್ಕುಗಳು ಮತ್ತು ಹಿತಾಸಕ್ತಿಗಳನ್ನು ರಕ್ಷಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಚೀನಾ ಪ್ರತ್ಯುತ್ತರ ನೀಡಿದೆ.
ಫೆಂಟನೈಲ್ ತಯಾರಿಕೆಗೆ ಬೇಕಾದ ರಾಸಾಯನಿಕಗಳ ಉತ್ಪಾದನೆ ತಡೆಗೆ ಚೀನಾ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿ ಚೀನಾ ಮೇಲೆ ಶೇ 10ರಷ್ಟು ಸುಂಕವನ್ನು ಅಮೆರಿಕ ವಿಧಿಸಿದೆ.
ಈ ಬೆನ್ನಲ್ಲೇ ಚೀನಾ ವಿದೇಶಾಂಗ ಸಚಿವಾಲಯ ಭಾನುವಾರ ರಾತ್ರಿ ಹೇಳಿಕೆ ಬಿಡುಗಡೆ ಮಾಡಿದೆ. ಅಮೆರಿಕವು ತಪ್ಪುಗಳನ್ನು ಸರಿಪಡಿಸಿಕೊಳ್ಳಲಿ, ಮಾದಕ ವಸ್ತು ಪೂರೈಕೆ ತಡೆಗೆ ಸಕಾರಾತ್ಮಕ ಕ್ರಮ ಕೈಗೊಳ್ಳಲಿ ಮತ್ತು ಚೀನಾ-ಅಮೆರಿಕ ನಡುವಿನ ಸಂಬಂಧವನ್ನು ಸುಸ್ಥಿರಗೊಳಿಸಲು ಉತ್ತೇಜನ ನೀಡಲಿ ಎಂದು ಹೇಳಿದೆ.
ಅಮೆರಿಕದ ಕ್ರಮವು ವಿಶ್ವ ವ್ಯಾಪಾರ ಸಂಸ್ಥೆಯ ನಿಯಮಗಳನ್ನು ಉಲ್ಲಂಘಿಸುತ್ತದೆ ಎಂದು ಅದು ಹೇಳಿದೆ.